ತುಮಕೂರು:ನಾಡಿನ ಜನರು ಒಗ್ಗಟ್ಟಿನಿಂದ ಕನ್ನಡ ನಾಡು ನುಡಿಗಾಗಿ ಶ್ರಮಿಸಬೇಕು,ತುಮಕೂರು ನಗರದ 35 ವಾರ್ಡುಗಳಲ್ಲಿ ವರ್ಷದ 365 ದಿನವೂ ಕನ್ನಡ ಭಾಷೆ,ಗಡಿ,ಜಲದ ವಿಚಾರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು,ಕನ್ನಡಕ್ಕೆ ಒತ್ತು ನೀಡಿ ಸ್ವಾಸ್ತ್ಯ ಸಮಾಜಕ್ಕಾಗಿ ಕನ್ನಡವನ್ನು ಎಲ್ಲರೂ ಹೆಚ್ಚಾಗಿ ಬಳಸಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಕರೆ ನೀಡಿದರು.
ಅವರು ಇಂದು ತುಮಕೂರಿನ ನಿರ್ಭಯ ಮಹಿಳಾ ಜಾಗೃತಿ ವೇದಿಕೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ನಗರ ಘಟಕ ಮತ್ತು ಚಿದಂಬರ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತ, ತುಮಕೂರು ಶಾಖೆಯ ಸಹಯೋಗದಲ್ಲಿ ಜಯನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, 31ನೇ ವಾರ್ಡಿನಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದಾಯಕ,ಎಲ್ಲ ಭಾಷೆಗಳನ್ನು ಗೌರವಿಸುವ ಔದಾರ್ಯ ಕನ್ನಡಿಗರದ್ದು ಆದರೆ ಕನ್ನಡವನ್ನು ಬೆಳೆಸಿ ಉಳಿಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ ಎಂದು ಎಚ್ಚರಿಸಿದರು.
ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡುತ್ತಾ, ಕನ್ನಡಿಗರಿಗಾಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇದೇ ತಿಂಗಳು 29 ಮತ್ತು 30ರಂದು ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಹಕ್ಕೊತ್ತಾಯ ಮಾಡುತ್ತಿರುವುದು ಉತ್ತಮ ಸಂಗ ತಿಯಾಗಿದೆ ಎಂದರು.
31ನೇ ವಾರ್ಡಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಗ್ರಂಥಾಲಯ ನಿರ್ಮಾಣ ಮಾಡಲು ದಾನಿಗಳೊಂದಿಗೆ ನಾವು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ 31ನೇ ವಾರ್ಡಿನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಆಸಕ್ತಿ ತೋರಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಚಿದಂಬರ ಸೌಹಾರ್ದ ಪತ್ತಿನ ಸಹಕಾರನಿಯಮಿತದ ಅಧ್ಯಕ್ಷ ಜಿ.ಕೆ.ಕುಲಕರ್ಣಿ, ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಗೀತಾನಾಗೇಶ್,ಶ್ರೀಮತಿ ನಂದಿನಿ,ಸುನoದಾ,ಶ್ರೀನಿವಾಸ್,ಮಾಜಿ ಪಾಲಿಕೆ ಸದಸ್ಯ ಸಿ.ಎನ್.ರಮೇಶ್,ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ನ್ಯಾಯವಾದಿ ಕೆ.ಎಸ್.ಆಶಾ ಮತ್ತು ಮಾಜಿ ಟೂಡಾ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಶೈಲಜಾವೆಂಕಟೇಶ್ ಪ್ರಾರ್ಥಿಸಿ,ಗೀತಾನಾಗೇಶ್ ಸ್ವಾಗತಿಸಿ,ಸುಗುಣಾದೇವಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು,ಪ್ರಕಾಶ್ ಭಾರಧ್ವಾಜ್ ವಂದಿಸಿದರು.
—————-ಚಂದ್ರಚೂಡ