
ಚಿಕ್ಕಮಗಳೂರು-ತಾಲ್ಲೂಕಿನ ಮತ್ತಾವರ ಗ್ರಾಮದ ಶ್ರೀ ಕೆಂಚರಾಯಸ್ವಾಮಿ ದೇಗುಲದ ಪ್ರಥಮ ವರ್ಷದ ವಾರ್ಷಿಕೋತ್ಸವ ಮಹೋತ್ಸವ ನೂರಾರು ಮಹಿಳೆಯರು, ಮಕ್ಕಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಶುಕ್ರವಾರ ಸಂಪನ್ನಗೊoಡಿತು.
ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಗ್ರಾಮದ ಮಹಿಳೆಯರು ಕೆರೆಯಿಂದ ಗಂಗೆಯನ್ನು ಹೊತ್ತು ತಂದು ಶ್ರೀ ಕೆಂಚರಾಯಸ್ವಾಮಿ, ಗುಂಡಿನಮ್ಮ, ಅರಳೀಮರದಮ್ಮ ಹಾಗೂ ಲೋಕದಮ್ಮ ದೇವತೆಗಳಿಗೆ ಅಭಿಷೇಕ ನಡೆಸಿದರು.
ತದನಂತರ ಗಣಪತಿಪೂಜೆ, ಸ್ವಸ್ತಿವಾಚನ, ಪಂಚಕಳಸ, ನಾಂದಿ, ಪ್ರಧಾನ ಕಳಸ ಪೂಜೆಯೊಂದಿಗೆ ಗ್ರಾಮದ ದೇವತೆಗಳಿಗೆ ಮಹಾರುದ್ರಾಭಿಷೇಕ, ಮಹಾರುದ್ರಯಾಗ, ಅಷ್ಟೋತ್ತರ ಪೂಜೆ ಸೇರಿದಂತೆ ವಿಶೇಷ ಪೂಜಾವಿಧಿವಿಧಾನಗಳು ಪೂರೈಸಲಾಯಿತು. ಶ್ರೀಯವರನ್ನು ಮಂಪಟದಲ್ಲಿ ಕುಳ್ಳಿರಿಸಿ ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಿದರು.

ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಸಂಪನ್ನಗೊoಡ ಬಳಿಕ ಸಾರ್ವಜನಿಕ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ದೇವಾಲಯ ಪೂಜಾ ಕೈಂಕರ್ಯವನ್ನು ಅರ್ಚಕ ಹೋಮೇಶ್ವರ ಸ್ವಾಮಿ ಮತ್ತು ಹೇಮಂತ ಶಾಸ್ತ್ರಿಗಳು ನೆರವೇರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ತ್ರಿಮೂರ್ತಿ ಮಾತನಾಡಿ, ಕೆಂಚರಾಯಸ್ವಾಮಿ ದೇಗುಲವನ್ನು ಪ್ರಾರಂಭಿಸಿ ಇದೀಗ ವರ್ಷ ಪೂರೈಸುತ್ತಿದ್ದು ಕಳೆದ ಸಾಲಿನಲ್ಲಿ ದೇವಾಲಯವನ್ನು ಶ್ರೀ ಬಸವನಾಗಿದೇವ ಶರಣರನ್ನು ಆಹ್ವಾನಿಸಿ ಅತ್ಯಂತ ಸಂಭ್ರಮದಿoದ ದೇವಾಲಯ ಲೋಕಾರ್ಪಣೆ ನೆರವೇರಿಸಲಾಗಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಸದಸ್ಯರಾದ ಮಹೇಶ್, ಕುಮಾರ್, ಯೋಗೀಶ್, ಸಿದ್ದಯ್ಯ, ಓಂಕಾರಿ, ಉಲ್ಲಾಸ್, ಮಹೇಶ್, ಪೂರ್ಣೇಶ್, ಗುರುಸ್ವಾಮಿ, ಚೇತನ್ ಹಾಗೂ ಗ್ರಾಮದ ಯುವಕರ ಬಳಗ ಹಾಗೂ ಭಕ್ತಾಧಿಗಳು ಹಾಜರಿದ್ದರು.
———–ಸುರೇಶ್