ಬೇಲೂರು-ಸ್ಪಂದಿಸದ ಅಭಕಾರಿ ಅಧಿಕಾರಿ-ಸುಳ್ಳು ಲೆಕ್ಕ ಬರೆವ ಅರಣ್ಯಾಧಿಕಾರಿ-ಏಜೆಂಟರ ಕೈಗೊಂಬೆಯಾದ ಕಾರ್ಮಿಕ ಅಧಿಕಾರಿ-ಹೆಚ್.ಕೆ ಸುರೇಶ್ ಕಿಡಿ

ಬೇಲೂರು;-ಕನ್ನಡದ ಶಿಲಾಶಾಸನವಿರುವ ಹಲ್ಮಿಡಿ ಗ್ರಾಮದ ಸ್ವಾಗತ ದ್ವಾರದ ಬಳಿಯಲ್ಲಿಯೇ ಇರುವ ಮದ್ಯದಂಗಡಿಯ ಸ್ಥಳಾಂತರ ಮಾಡುವಂತೆ ಅಭಕಾರಿ ನಿರೀಕ್ಷಕಿಯವರಿಗೆ ತಿಳಿಸಿದರು ಕೂಡ ಕ್ರಮ ಕೈಗೊಳ್ಳದೇ ಆ ಮದ್ಯದಂಗಡಿ ಮಾಲೀಕರಿಂದ ತಿಂಗಳ ಮಾಮೂಲಿ ಪಡೆಯುತ್ತ ಅವರ ಋಣ ತೀರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆಂದು ಶಾಸಕ ಹೆಚ್.ಕೆ ಸುರೇಶ್ ಕಿಡಿಕಾರಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಹಲ್ಮಿಡಿ ಶಾಸನವನ್ನು ನೋಡಲು ಪ್ರತಿನಿತ್ಯ ನೂರಾರು ಜನ ಪ್ರವಾಸಿಗರು ಬರುತ್ತಾರೆ.ಆ ಸ್ಥಳಕ್ಕೊಂಡು ಪಾವಿತ್ರ್ಯತೆ ಇದೆ.ಅಲ್ಲಿರುವ ಬಾರ್ ನ ಕಾರಣಕ್ಕೆ ಅಲ್ಲಿಗೆ ಬರುವ ಪ್ರವಾಸಿಗರು ಹಾಗು ಕನ್ನಡ ಪ್ರೇಮಿಗಳು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಆ ಬಾರ್ ನ ಕಾರಣಕ್ಕೆ ಸ್ಥಳೀಯರಿಗೂ ಸಾಕಷ್ಟು ಅನಾನುಕೂಲತೆಗಳಾಗುತ್ತಿದ್ದು ಕ್ರಮ ಕೈಗೊಳ್ಳುವಂತೆ ತಿಳಿಸಿದರು ಸಹ ಅಭಕಾರಿ ನಿರೀಕ್ಷಕಿಯವರು ಉಡಾಫೆ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ದೂರಿದರು.

ತಾಲೂಕಿನಾದ್ಯಂತ ಎಗ್ಗಿಲ್ಲದೆ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ.ಜನಸಾಮನ್ಯರು ಸುಲಭವಾಗಿ ಸಿಗುವ ಮದ್ಯವನ್ನು ಕುಡಿದು ಹಾಳಾಗುತ್ತಿದ್ದಾರೆ.ಹೆಣ್ಣುಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದು ಇದನ್ನು ನಿಯಂತ್ರಿಸಬೇಕಾದ ಅಧಿಕಾರಿ ತನಗೂ ಅಕ್ರಮ ಮದ್ಯ ಮಾರಾಟಕ್ಕೂ ಸಂಬಂಧವಿಲ್ಲವೆನ್ನುವಂತಿದ್ದಾರೆ ಎಂದು ಶಾಸಕರು ಆಕ್ರೋಶ ಹೊರಹಾಕಿದರು.

ಸರಕಾರಕ್ಕೆ ಆಧಾಯ ಮಾಡಿಕೊಡುವುದೇ ನನ್ನ ಕರ್ತವ್ಯ ನಿರ್ವಹಣೆಯ ಮೂಲ ಮಂತ್ರ ಎಂಬಂತೆ ವರ್ತಿಸುವ ಅವರು ಮನಃಸಾಕ್ಷಿಗೆ ಒಪ್ಪುವಂತೆ ಇನ್ನು ಮುಂದಾದರು ಕರ್ತವ್ಯ ನಿರ್ವಹಿಸಲಿ ಎಂದು ಸಲಹೆ ನೀಡಿದರು.

ನೂರು ಗಿಡ ನೆಟ್ಟು ಸಾವಿರ ಎನ್ನುವ ಅರಣ್ಯಾಧಿಕಾರಿ…

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ರಾಜಕುಮಾರ್ 100 ಸಸಿಗಳನ್ನು ನೆಟ್ಟು 1000 ಸಸಿಗಳ ಲೆಕ್ಕ ನೀಡುತ್ತಿದ್ದಾರೆ.ಅರಣ್ಯಗಳಲ್ಲಿ ಗಿಡ ನೆಟ್ಟು ಪೋಷಿಸುವುದನ್ನು ಬಿಟ್ಟು ಕೇವಲ ರಸ್ತೆ ಬದಿಯಲ್ಲಿಯೇ ಸಸಿ ನೆಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ಕೊಡಗು ಭಾಗದಿಂದ ತಮಗೆ ಬೇಕಾದ ಗುತ್ತಿಗೆದಾರರಿಂದ ಕೆಲಸ ಮಾಡಿಸುತ್ತಾ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಶಾಸಕರು ಗಂಭೀರ ಆರೋಪ ಮಾಡಿದರು.

ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ್ ಅರ್ಹರಿಗೆ ಕಾರ್ಮಿಕರ ಕಾರ್ಡ್ ನೀಡದೆ ಏಜೆಂಟ್ ರ ಕೈಗೊಂಬೆಯಾಗಿ ಅವರು ಸೂಚಿಸಿದವರಿಗಷ್ಟೇ ಕಾರ್ಡ್ ಗಳ ನೀಡುತ್ತಿದ್ದು ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವ ಜೊತೆಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿ ಪಾಠ ಕಲಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ವೈಪಲ್ಯದಿಂದ ಬೇಕಾಬಿಟ್ಟಿ ರಸ್ತೆಯನ್ನು ಆಗೆದು ವಿರೂಪ ಮಾಡಿದ್ದಾರೆ.ಅಂಗವಾಡಿಗಳ ಕಟ್ಟಡ ನಿರ್ಮಾಣದಲ್ಲಿ ಕಳಪೆಯಾಗಿವೆ.ಅಧಿಕಾರಿಗಳು ಗುತ್ತಿಗೆದಾರರ ಕಪಿಮುಷ್ಟಿಯಿಂದ ಹೊರ ಬಂದು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ತಿಳಿಸಿದರು.

ಕೆಡಿಪಿ ಸದಸ್ಯರುಗಳಾದ ಚೇತನಗೌಡ, ನಂದೀಶ್ ಮತ್ತು ಗ್ಯಾರೆಂಟಿ ಯೋಜನೆ ಅಧ್ಯಕ್ಷ ಅನಂದ್ ಮಾತನಾಡಿ, ತಾಲ್ಲೂಕಿನ ಬಹುತೇಕ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ನೀಡದೆ ಲೆಕ್ಕೆ ಬರೆಯುತ್ತಿದ್ದಾರೆ.ಅಂಗನವಾಡಿ ಕೇಂದ್ರಗಳು ಹಗರಣಗಳ ಕೇಂದ್ರಗಳಾಗಿ ಮಾರ್ಪಟ್ಟಿವೆ.ಆರೋಗ್ಯ ಇಲಾಖೆಯಲ್ಲಿನ ರಕ್ಷಾ ಸಮಿತಿಗೆ ಬಂದ 14 ಲಕ್ಷ ರೂಪಾಯಿ ಹಣದಲ್ಲಿ ಭ್ರಷ್ಟಾಚಾರ ನಡೆದಿದೆ.ಇಲಾಖೆಗಳಲ್ಲಿನ ಅಧಿಕಾರಿಗಳ ವೈಫಲ್ಯದಿಂದ ಸರ್ಕಾರದ ಪ್ರಮುಖ ಯೋಜನೆಗಳು ಕಾರ್ಯಗತವಾಗುತ್ತಿಲ್ಲ.ರಸ್ತೆಗಳು ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.ಅರ್ಹರನ್ನು ಬಿಪಿಎಲ್ ಕಾರ್ಡ್ ನಿಂದ ತೆಗೆದು ಹಾಕುವ ಕ್ರಮ ಖಂಡಿನೀಯವೆಂದು ದೂರಿದರು.

ಸಭೆಯಲ್ಲಿ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರಮೇಶ್, ತಹಸೀಲ್ದಾರ್ ಎಂ.ಮಮತ,ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಸಂತಕುಮಾರ್ ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?