
ಚಿಕ್ಕಮಗಳೂರು-ದೈವಿಕ ಪರಂಪರೆಯ ವಾರಸುದಾರರು ನಾವಾಗಬೇಕು.ಆಚರಣೆ ಮೊದಲು, ಬೋಧನೆ ನಂತರ ಎಂಬುದು ಆದರ್ಶವಾಗಬೇಕು ಎಂದು ಶ್ರೀ ಸತ್ಯಸಾಯಿ ಸೇವಾಸಮಿತಿಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ನುಡಿದರು.
ಸಾಯಿ ಮಧುವನ ಬಡಾವಣೆಯ ಶ್ರೀಸತ್ಯಸಾಯಿ ಸೇವಾಕ್ಷೇತ್ರದಲ್ಲಿ ಶ್ರೀಸಾಯಿ ಬಾಬಾ ಅವರು 99ನೆಯ ಜನ್ಮದಿನೋತ್ಸವವನ್ನು ಪ್ರಶಾಂತಿ ಧ್ವಜಾರೋಹಣ ನೆರವೇರಿಸಿ ಮಂದಿರದಲ್ಲಿ ಜ್ಯೋತಿ ಪ್ರಜ್ವಲನಗೊಳಿಸಿ ಅವರು ಮಾತನಾಡಿದರು.
ಪುಟಪರ್ತಿಯಲ್ಲಿ 99ವರ್ಷಗಳ ಹಿಂದೆ ಜನಿಸಿ ಕುಗ್ರಾಮವನ್ನು ವಿಶ್ವದ ಆಧ್ಯಾತ್ಮಿಕ ಕೇಂದ್ರವಾಗಿಸಿದ ಕೀರ್ತಿ ಬಾಬಾ ಅವರಿಗೆ ಸಲ್ಲುತ್ತದೆ. ವೇದಸಾರವನ್ನು ಸುಲಭವಾಗಿ ಜನಮಾನಸಕ್ಕೆ ತಲುಪಿಸಿದವರು. ಟೀಕೆ-ಟಿಪ್ಪಣಿ-ಅವಹೇಳನ-ದೂಷಣೆ-ನಿಂದನೆ-ಅಪಮಾನ ಮಾಡಿದವರನ್ನೂ ಪ್ರೀತಿಸಿದವರು. ವಿಷ ಉಣ್ಣಿಸಿದವರನ್ನೂ ಪ್ರೀತಿಸುವ ಮೂಲಕ ಆದರ್ಶವಂತರಾಗಿ ಮಾದರಿಯ ಹಾದಿಯನ್ನು ನಿರ್ಮಿಸಿದ್ದಾರೆಂದರು.

ನಿಸ್ವಾರ್ಥ ಸೇವೆ ಬಹಳ ಮುಖ್ಯ. ದೇಹ, ಮಾತು ಮತ್ತು ಮನಸ್ಸು ಶುದ್ಧವಾದಾಗ ಹೃದಯವೂ ಪರಿಶುದ್ಧವಾಗುತ್ತದೆ. ಮಾಹಿತಿ ನೀಡುವುದಷ್ಟೇ ಅಲ್ಲ ಪರಿವರ್ತನೆಯೆ ಸಾಯಿ ಸಮಿತಿಯ ಆಶಯಗಳು ಎಂದ ಶಿವಮೂರ್ತಿ, ಮಾತು ಮತ್ತು ಕ್ರಿಯೆ ಬೇರೆಯವರಿಗೆ ಆದರ್ಶಪ್ರಾಯವಾಗಿರಬೇಕು. ಜೀವನವೇ ಸಂದೇಶ ಎಂದು ಬಾಳಿ ಬದುಕಿದವರೆಂದು ಬಣ್ಣಿಸಿದರು.ಇರುವುದೊಂದೇ ಜಾತಿ ಅದು ಮಾನವ ಜಾತಿ. ಇರುವುದೊಂದೇ ಧರ್ಮ ಅದು ಪ್ರೇಮಧರ್ಮ. ಇರುವುದೊಂದೇ ಭಾಷೆ ಅದು ಹೃದಯದ ಭಾಷೆ. ದೇವನೊಬ್ಬ ನಾಮ ಹಲವು. ದೈವಿಕ ಪರಂಪರೆಯ ವಾರಸುದಾರರಾಗಬೇಕೆಂಬುದು ಬಾಬಾ ಅವರ ಆಶಯವಾಗಿತ್ತು ಎಂದರು.
ಮನುಕುಲಕ್ಕೆ ಸ್ವಾಮಿಯ ಕೊಡುಗೆ ಅಮೂಲ್ಯ ಮತ್ತು ಅಪಾರ. ಆರೋಗ್ಯ, ಸಂಸ್ಕೃತಿ, ಧರ್ಮ, ಶಿಕ್ಷಣ, ಕುಡಿಯುವ ನೀರು, ವೇದ ಪ್ರಸಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆ ಜಗತ್ತು ಕಂಡು ಕೇಳರಿಯದಷ್ಟು ಅಗಾಧ. ಅವರ ಒಂದೊoದು ವಾಕ್ಯವೂ ಒಂದೊoದು ಸೂತ್ರ-ಮಂತ್ರ. ಪ್ರತಿ ಉಪನ್ಯಾಸವೂ ವೇದಗಳ ಸಾರ. ಯಾರನ್ನೂ ದ್ವೇಷಿಸಬಾರದು, ಸರ್ವರನ್ನೂ ಪ್ರೀತಿಸಬೇಕೆಂಬುದು ಪ್ರಮುಖ ಬೋಧನೆ ಎಂದು ಹೇಳಿದರು.

ಪ್ರೇಮ ಮತ್ತು ಸೇವೆ ಬಾಬಾ ಅವರ ಪ್ರಮುಖ ಮಾನವೀಯ ತತ್ವ. ಜಗತ್ತು ಬದಲಾಗಲು ನಾನು ಮೊದಲು ಬದಲಾಗಬೇಕು. ಮೊದಲು ಆಚರಿಸು ನಂತರ ಬೋಧಿಸು. ಹೃದಯ ಪರಿಶುದ್ಧವಾದರೆ ದೇವರು ನೆಲೆಸುತ್ತಾನೆ. ದುಶ್ಕರ್ಮಗಳಿಂದ ಅಪವಿತ್ರವಾದ ಕಲುಷಿತವಾದ ಶರೀರ ಶುದ್ಧಗೊಳಿಸಿಕೊಳ್ಳಬೇಕು.
ಕ್ಷಮಿಸುವುದರಿಂದ ಮತ್ತು ಮರೆಯುವುದರಿಂದ ಪ್ರೇಮಮಯ ಜೀವನ ಸಾಧ್ಯ. ಕೊಡುವುದು ಮತ್ತು ಮರೆಯುವುದು ನಮ್ಮ ಸ್ವಭಾವ ಆಗಬೇಕು. ಯಾರನ್ನೂ ದೂಷಿಸದೆ, ದ್ವೇಷಿಸದೆ ಪ್ರೀತಿಸುವುದರಿಂದ ದೈವಿಕ ಪರಂಪರೆಯ ವಾರಸುದಾರರು ನಾವಾಗಬಹುದೆಂದು ಕೈಗಾರಿಕಾ ಕೇಂದ್ರ ವಿಶ್ರಾಂತ ಉಪನಿರ್ದೇಶಕರೂ ಆಗಿದ್ದ ಶಿವಮೂರ್ತಿ ಹೇಳಿದರು.
ಶ್ರೀಸತ್ಯಸಾಯಿ ಸೇವಾಸಮಿತಿ ಸಂಚಾಲಕ ಟಿ.ಪಿ.ಭೋಜೇಗೌಡ ಸ್ವಾಗತಿಸಿ-ನಿರೂಪಿಸಿದರು.ಸಾಮೂಹಿಕ ಭಜನೆ ನಡೆಸಲಾಯಿತು.
ಶ್ರೀಸತ್ಯಸಾಯಿ ಸೇವಾಟ್ರಸ್ಟ್ ಅಧ್ಯಕ್ಷ ಎಂ.ಆರ್.ನಾಗರಾಜ್, ಉಪಾಧ್ಯಕ್ಷ ಡಾ.ಚಂದ್ರಶೇಖರ್, ಕರ‍್ಯದರ್ಶಿ ಎಲ್.ಎಚ್.ಅಂಕೋಲೇಕರ್, ಜಿಲ್ಲಾ ಯುವಸಂಯೋಜಕ ರವಿ, ಜಿಲ್ಲಾ ಸೇವಾ ಸಂಯೋಜಕ ಎಸ್.ಆರ್.ವೆಂಕಟೇಶ್, ಜಿಲ್ಲಾ ಯುವ ಸಂಯೋಜಕ ಗೌತಮ್, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನರಾವ್ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯ ಸೇವಾ ಸಮಿತಿ ಸೇವಾ ಸಂಯೋಜಕಿ ರಮಾರಾಜು, ಶೈಕ್ಷಣಿಕ ಸಂಯೋಜಕಿ ನರಸಮ್ಮ, ಮಹಿಳಾ ಯುವಸಂಯೋಜಕಿ ಅಖಿಲಾವಾಸು, ಸುಜಾತಾಚಂದ್ರಶೇಖರ್ ನೇತೃತ್ವದಲ್ಲಿ ಮಂದಿರವನ್ನು ಹೂವು, ತಳಿರುತೋರಣ, ರಂಗವಲ್ಲಿಯಿoದ ವಿಶೇಷವಾಗಿ ಅಲಂಕರಿಸಿ ಸಾಮೂಹಿಕ ಭಜನೆ, ಸಂಕೀರ್ತನೆ ನಡೆಸಿದರು.
ಬೆಳಗಿನಜಾವ 5.30ಕ್ಕೆ ಬಿಳಿಸಮವಸ್ತ್ರ ಧರಿಸಿದ ಸಾಯಿ ಭಕ್ತರು ಮಂದಿರದಲ್ಲಿ ಓಂಕಾರ ಸುಪ್ರಭಾತ ಪಠಿಸಿದರು. ಮಧುವನ ಬಡಾವಣೆಯಲ್ಲಿ ಸಂಕೀರ್ತನೆ ನಡೆಸಿದರು. ಸಾಮೂಹಿಕ ರುದ್ರಪಠಣದ ನಂತರ 36ದಂಪತಿಗಳು ಶ್ರೀಸಾಯಿ, ಸತ್ಯನಾರಾಯಣಸ್ವಾಮಿ ಪೂಜೆ ನಡೆಸಿದರು.