ಕೆ.ಆರ್.ಪೇಟೆ-ರಸ್ತೆ ದುರಸ್ತಿ ನಡೆಸುವ ಭರವಸೆ ನೀಡಿದ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್-ಪ್ರತಿಭಟನೆ ಹಿಂಪಡೆದ ಆಲಂಬಾಡಿಕಾವಲು ಗ್ರಾಮಸ್ಥರು

ಕೆ.ಆರ್.ಪೇಟೆ-ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿಕಾವಲು ಗ್ರಾಮದಲ್ಲಿರುವ ವಿವಿಧ ರಸ್ತೆಗಳು ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೇ, ಗುಂಡಿ ಬಿದ್ದು ಹಾಳಾಗಿವೆ. ಇದರಿಂದ ವಾಹನಗಳು, ಜನಸಾಮಾನ್ಯರು ಓಡಾಡಲು ತೀವ್ರ ತೊಂದರೆಯಾಗಿದೆ ಹಾಗಾಗಿ ನರೇಗಾ ಯೋಜನೆ ಅಡಿಯಲ್ಲಿ ಅಥವಾ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಗ್ರಾಮದ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡಿಸಿಕೊಡಬೇಕು ಎಂದು ಆಲಂಬಾಡಿಕಾವಲು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಗ್ರಾಮದ ಮುಖಂಡರು ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸoಜೀವಪ್ಪ, ಯುವ ಮುಖಂಡ ಮೋಹನ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಚಂದ್ರಕಲಾ ಬಸವರಾಜು, ಗ್ರಾ.ಪಂ.ಸದಸ್ಯರಾದ ಮುಜಹಿದ್, ಅತೀಕ್‌ಅಹಮದ್, ಆಲಂಬಾಡಿಕಾವಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಿವಾಕರ್‌ಮಾಸ್ತಿ, ಗೌಸ್, ಖಾಸಿಂ, ಮತ್ತಿತರರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಮಹಿಳೆಯರು ಹಾಗೂ ಗ್ರಾಮಸ್ಥರು ಗ್ರಾಮದ ಮುಸ್ಲಿಂ ಬಡಾವಣೆ ಸೇರಿದಂತೆ ಗ್ರಾಮದಲ್ಲಿ ವಿವಿಧ ಸಮುದಾಯಗಳು ವಾಸಿಸುವ ಹಲವು ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ.

ನೀರು ರಸ್ತೆಯಲ್ಲಿ ಇರುವ ಗುಂಡಿಯಲ್ಲಿ ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸದರಿ ರಸ್ತೆಯಲ್ಲಿ ಮಕ್ಕಳು, ವಯೋವೃದ್ದರು ಓಡಾಡಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನಗಳು, ಇತರೆ ವಾಹನಗಳು ಓಡಾಡಲು ತೀವ್ರ ತೊಂದರೆಯಾಗಿರುತ್ತದೆ.ಹಾಗಾಗಿ ಕೂಡಲೇ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಿಸಿಕೊಡುವ ಮೂಲಕ ಆಲಂಬಾಡಿಕಾವಲು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುಡುಗನಹಳ್ಳಿ ವೆಂಕಟೇಶ್, ಪಿಡಿಓ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಅಧ್ಯಕ್ಷರಾದ ವೆಂಕಟೇಶ್ ಅವರು ಮಾತನಾಡಿ ಅತಿ ಶೀಘ್ರವೇ ರಸ್ತೆ ದುರಸ್ತಿಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ಸು ಪಡೆದರು.

———–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?