ಕೆ.ಆರ್.ಪೇಟೆ-ಸ್ಕೂಲ್ ಆಫ್ ಇಂಡಿಯಾ ಶಾಲಾ ವಾರ್ಷಿಕೋತ್ಸವ-ವಿದ್ಯಾರ್ಥಿಗಳು ಏಕಾಂಗ್ರತೆಯಿoದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು ಎಂದು ಸಲಹೆ ನೀಡಿದ ಮಕ್ಸುದ್‌ ಅಲಿಖಾನ್

ಕೆ.ಆರ್.ಪೇಟೆ-ವಿದ್ಯಾರ್ಥಿಗಳು ಏಕಾಂಗ್ರತೆಯಿoದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು.ಪರೋಪಕಾರ ಹಾಗೂ ಸೇವಾ ಮನೋಭಾವನೆ ಜೀವನದ ಉಸಿರಾಗಬೇಕು ಎಂದು ಶಿಕ್ಷಣ ತಜ್ಞ, ಸಂಸ್ಕೃತಿ ಸಂಘಟಕ ಮಕ್ಸುದ್‌ ಅಲಿಖಾನ್ ಹೇಳಿದರು. 

ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯ ವಾರ್ಷಿಕೋತ್ಸವ-2024ರ ಅಂಗವಾಗಿ ಆಯೋಜಿಸಿದ್ದ ‘ಯುಗಾಂತರ ಸಂಸ್ಕೃತಿ ಉತ್ಸವ ಇತಿಹಾಸದ ಪುಟಗಳ ಅವಲೋಕನ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಸತ್ಪ್ರಜೆಗಳಾದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮವಾದ ಸಂಸ್ಕಾರ ಹಾಗೂ ಶಿಸ್ತನ್ನು ನೀಡಿ ಮಾನವೀಯ ಗುಣಗಳನ್ನು ತುಂಬಿ ಸಮಾಜಮುಖಿಯಾಗಿ ಮುನ್ನಡೆಸುವುದು ಇಂದಿನ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ತಿಳಿಸಿ ಇತಿಹಾಸದ ಪುಟಗಳ ಬಗ್ಗೆ ಜಾಗೃತಿ ಮೂಡಿಸಿ, ದೇಶ ಪ್ರೇಮವನ್ನು ತುಂಬಬೇಕಿದೆ.

ಮೈಸೂರು ಹುಲಿ ಟಿಪ್ಪುಸುಲ್ತಾನ್, ಒನಕೆ ಓಬವ್ವ, ಕಿತ್ತೂರರಾಣಿ ಚೆನ್ನಮ್ಮ ಹಾಗೂ ಯದುವಂಶ ತಿಲಕ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಜೀವನ ಸಾಧನೆಗಳು,ಸಮಾಜ ಸೇವಾ ಚಟುವಟಿಕೆಗಳು ಹಾಗೂ ಸ್ವಾತಂತ್ರ‍್ಯ ಹೋರಾಟದ ಹೆಜ್ಜೆಗಳನ್ನು ಪ್ರತಿಬಿಂಬಿಸುವ ಘಟನಾವಳಿಗಳನ್ನು ಮಕ್ಕಳ ಮೂಲಕವೇ ಅಭಿನಯಿಸಿ ಪ್ರದರ್ಶನ ಮಾಡಿಸುವ ಕೆಲಸ ಮಾಡಿದ್ದನ್ನು ಕಣ್ಣಾರೆ ಕಂಡು ಸಂತೋಷವಾಗಿದೆ.

ಈ ದಿಕ್ಕಿನಲ್ಲಿ ಮಕ್ಕಳನ್ನು ಸಜ್ಜುಗೊಳಿಸಿದ ಶಾಲೆಯ ಮುಖ್ಯ ಶಿಕ್ಷಕಿ ಶೈನಿಮೇರಿ ಡಯಾಸ್ ಅವರ ಕಾರ್ಯದಕ್ಷತೆಯನ್ನು ಶ್ಲಾಘಿಸುವುದಾಗಿ ಮಕ್ಸುದ್‌ಅಲಿಖಾನ್ ಅಭಿಮಾನದಿಂದ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ಕೇಂದ್ರದ ಮಾಜಿ ಸಚಿವರಾದ ಕೆ.ಆರ್. ಪೇಟೆಯ ಸುಪುತ್ರ ಕೆ.ರೆಹಮಾನ್ ಖಾನ್ ಅವರ ಕುಟುಂಬದ ಸದಸ್ಯರು ಸಮರ ಚಾರಿಟಬಲ್ ಟ್ರಸ್ಟ್ ಮೂಲಕ ಮೈಸೂರು- ಬೆಂಗಳೂರು ಮಹಾನಗರದ ಮಾದರಿಯಲ್ಲಿ ಸ್ಕೂಲ್ ಆಫ್ ಇಂಡಿಯಾ ಹೈಟೆಕ್ ಶಾಲೆಯನ್ನು ಸ್ಥಾಪಿಸಿ ಒಳ್ಳೆಯ ಗುಣ ಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

ಅವರು ಈ ಮೂಲಕ ಜನ್ಮ ಭೂಮಿಯ ಋಣವನ್ನು ತೀರಿಸಲು ಬದ್ಧತೆ ಪ್ರದರ್ಶನ ಮಾಡಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಷಯವಾಗಿದೆ ಎಂದು ಹೇಳಿದರು.

ಸಮರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಶಾಜಿಯಾ ಮಕ್ಸುದ್ ಮಾತನಾಡಿ, ಕೇಂದ್ರ ಪಠ್ಯಗಳ ಆಧಾರಿತ ಶಿಕ್ಷಣವನ್ನು ಸ್ಕೂಲ್ ಆಫ್ ಇಂಡಿಯಾ ಶಾಲೆಯು ನೀಡುತ್ತಿದ್ದು ಶೇಕಡ ನೂರಕ್ಕೆ ನೂರರಷ್ಟು ಫಲಿತಾಂಶ ತಂದುಕೊಡುತ್ತಾ ಬಂದಿದೆ.ಕೃಷ್ಣರಾಜಪೇಟೆ ತಾಲೂಕಿನ ಕೀರ್ತಿಯನ್ನು ಬೆಳಗುವ ಕೆಲಸವನ್ನು ಶಾಲೆಯ ಶಿಕ್ಷಕರು ಮಾಡುವ ಮೂಲಕ ಬದ್ಧತೆಯನ್ನು ಪ್ರದರ್ಶನ ಮಾಡಲು ಶಾಜಿಯಾ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್ ಶಿಕ್ಷಣ ತಜ್ಞ ಡಾ.ಎನ್.ಎನ್.ಪ್ರಹ್ಲಾದ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಗೌಸ್‌ಖಾನ್, ಶಾಲೆಯ ಆಡಳಿತಾಧಿಕಾರಿ ಖಾಲಿದ್ ಹುಸೇನ್‌ಖಾನ್ , ಮೈಸೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್  ಪ್ರಾಂಶುಪಾಲೆ ಮಂಜುಳಾ ಶರ್ಮ, ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡಿಪಿಎಸ್ ಶಾಲೆಯ ಪ್ರಾಂಶುಪಾಲೆ ಅನುಪಮಾ ರಾಮಚಂದ್ರ, ಡಿಪಿಎಸ್ ಬೆಂಗಳೂರು ಸೌತ್ ಶಾಲೆಯ ಪ್ರಾಂಶುಪಾಲೆ ಅನಿತಾ ಬ್ರಿಜೇಶ್,  ಕೆ.ಆರ್.ಪೇಟೆ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಂಶುಪಾಲೆ ಶೈನಿಮೇರಿ ಡಯಾಸ್, ಕಲಿಂಮುಲ್ಲಾ, ರಾಜೀವ್, ಅಂಜಲಿತ್ರಿವೇದಿ, ಮತ್ತಿತರರು ಭಾಗವಹಿಸಿದ್ದರು.

——–ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?