ಮೈಸೂರು-ನಗರದ ಚಾಮುಂಡಿಪುರoನಲ್ಲಿರುವ ಭೂಮಿಕಾ ಅಸೋಸಿಯೇಟ್ಸ್ ಹಾಗೂ ದಿವಂಗತ ಮೈಕ್ ಚಂದ್ರು ಗೆಳೆಯರ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಜನಪ್ರಿಯ ಕನ್ನಡ ಚಲನಚಿತ್ರಗೀತೆಗಳ ನೈಜ ಸಂಗೀತ ಕಾರ್ಯಕ್ರಮವನ್ನು ಕನ್ನಡ ‘ಗೀತನಮನ’ದ ಮೂಲಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ರೂವಾರಿ ಸುರೇಶ್ ಅವರು ಮಾತನಾಡಿ, ಇದು ಈ ವರ್ಷದ ನಮ್ಮ ಸಂಸ್ಥೆಯ ನಾಲ್ಕನೇ ಕಾರ್ಯಕ್ರಮ ವಾಗಿದ್ದು,ಮೂಲೆಗುಂಪಾಗಿರುವ 60,70,80,90 ರ ದಶಕದ ಗೀತೆಗಳನ್ನು ಪುನಃ ಬೆಳಕಿಗೆ ತಂದು ಪ್ರೇಕ್ಷಕರಿಗೆ ಕೇಳಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಕಾರ್ಯಕ್ರಮಕ್ಕೂ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ನಾವು ಮೂರು ತಿಂಗಳ ಮುಂಚೆಯೇ ಪೂರ್ವತಯಾರಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ತಂಡದ ಗಾಯಕ ನಿತಿನ್ ರಾಜಾರಾಮ ಶಾಸ್ತ್ರೀ ಅವರು ಮಲಯ ಮಾರುತ ಚಿತ್ರದ ‘ಶಾರದೆ ದಯೆತೋರಿದೆ’ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ದಿವ್ಯ ಅವರ ಸಿರಿಕಂಠದಿoದ ‘ಮೂಡಲ ಮನೆಯ’, ಶ್ರೀಕರ ಅವರ ಧ್ವನಿಯಿಂದ ‘ಶರಣು ಕಾವೇರಿ ತಾಯೆ’, ಹಂಸಿನಿ ಅವರು ‘ಎಮ್ಮ ಮನೆಯಂಗಳದಿ’, ಅತಿಶಯ್ ಅವರು ‘ಕನ್ನಡ ನಾಡಿನ ಜೀವನದಿ’ ಗೀತೆಯನ್ನು ಪ್ರಸ್ತುತಪಡಿಸಿದರು.
ರೇವತಿಯವರು ‘ನಮ್ಮ ಮನೆಯ ನಂದನ’, ದಿವ್ಯ ಹಾಗೂ ನಿತಿನ್ ‘ಪ್ರೀತಿನೇ ಆ ದ್ಯಾವು ತಂದ’,ಹoಸಿನಿ ಹಾಗೂ ಶ್ರೀಕರ ‘ಉತ್ತರ ಧ್ರುವದಿಂ’ ಯುಗಳ ಗೀತೆಯನ್ನು, ಅತಿಶಯ್ ಅವರು ‘ಆಸೆಯ ಭಾವ’, ರೇವತಿಯವರು‘ಬಾನಲ್ಲು ನೀನೇ’, ದಿವ್ಯ ಅವರು ‘ನೇಸರ ನೋಡು’, ನಿತಿನ್ ಅವರು‘ನಾವಾಡುವ ನುಡಿಯೇ ಕನ್ನಡ ನುಡಿ’, ಹಂಸಿನಿ ಅವರು ‘ಯಾವ ಜನ್ಮದ ಮೈತ್ರಿ’, ರೇವತಿ ಹಾಗೂ ಶ್ರೀಕರ ಅವರು ‘ಬಳ್ಳಿಗೆ ಹೂವು ಚೆಂದ’,ಅತಿಶಯ್ ಹಾಗೂ ದಿವ್ಯ ‘ಈ ಸುಂದರ ಬೆಳದಿಂಗಳ’, ‘ಕನ್ನಡದ ರವಿ ಮೂಡಿ ಬಂದ’ ಗೀತೆಯನ್ನು ಸಮೂಹ ಕಲಾವಿದರು ಪ್ರಸ್ತುತಪಡಿಸಿದರು.
ಸುಮಾರು ಮೂರುವರೆ ಗಂಟೆಗಳ ಕಾಲ ನಿರಂತರವಾಗಿ ವೇದಿಕೆ ಕಾರ್ಯಕ್ರಮವಿಲ್ಲದೇ ನಡೆದು ಅತ್ಯಂತ ಯಶಸ್ವಿಯಾಯಿತು ಎಂಬುದಕ್ಕೆ ಪ್ರೇಕ್ಷಕರು ಕಟ್ಟಕಡೆಯ ಹಾಡಿನವರೆಗೂ ಅಲುಗಾಡದೇ ಕುಳಿತಿದ್ದುದೇ ಸಾಕ್ಷಿಯಾಯಿತು. ಲಕ್ಷ್ಮಿ ಸೌಂಡ್ ಸಿಸ್ಟಂ ಧ್ವನಿವರ್ಧಕವೂ ಅಷ್ಟೇ ಮಧುರವಾಗಿತ್ತು.ಮೈಸೂರಿನಲ್ಲಿ ಮನೆ ಮಾತಾಗಿರುವ ಅದ್ಭುತ ಪ್ರತಿಭೆ ಮೈಸೂರು ಆನಂದ್ ತಮ್ಮ ಮಿಮಿಕ್ರಿ ಗಾಯನ ಹಾಗೂ ನೃತ್ಯದಿಂದ ಎಲ್ಲ ಪ್ರೇಕ್ಷಕರನ್ನು ತುಸು ಹೊತ್ತು ನಗೆಗಡಲಿನಲ್ಲಿ ಮುಳುಗಿಸಿದರು.
ಮೈಸೂರು ಆಕಾಶವಾಣಿಯ ಹಿರಿಯ ನಿರೂಪಕ ಮಂಜುನಾಥ್ ಅವರ ನಿರೂಪಣೆ ಎಷ್ಟು ಸೊಗಸಾಗಿತ್ತೆಂದರೆ ಅವರು ಪ್ರತಿಯೊಂದು ಹಾಡಿನ ಗೀತೆ ರಚನೆ, ಸಂಗೀತ, ಹಿನ್ನೆಲೆ ಕಲಾವಿದರ ಹೆಸರು, ಚಿತ್ರದ ಹೆಸರು ಹಾಗೂ ಚಿತ್ರ ಯಾವ ವರ್ಷ ತೆರೆಕಂಡಿದ್ದು ಈ ಎಲ್ಲ ವಿವರಗಳನ್ನೂ ಅಚ್ಚುಕಟ್ಟಾಗಿ ವಿವರಿಸಿದರು.
ಕಾರ್ಯಕ್ರಮಕ್ಕೆ ಮೊದಲು ತಾಯಿ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ, ಮೈಸೂರು ಧ್ವನಿ ದಿವಂಗತ ಮೈಕ್ ಚಂದ್ರ
ಅವರನ್ನು ನೆನಪಿಸಲಾಯಿತು.