ಕೆ.ಆರ್.ಪೇಟೆ-ಹಳೆಯ ದ್ವೇಷದ ಹಿನ್ನೆಲೆಯಲ್ಲಿ 11ಮಂದಿಯ ಗುಂಪೊoದು ಆಟೋ ಅಡ್ಡಗಟ್ಟಿ ಅದರಲ್ಲಿದ್ದ ಐದು ಮಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಚಿಕ್ಕೋಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಸಹಳ್ಳಿ ಗ್ರಾಮದ ಸೌಂದರ್ಯ,ಪ್ರಸನ್ನ,ಸತೀಶ್,ಸಿ.ಎಸ್.ದೇವರಾಜು,ಯೋಗೇಶ್ ಗಂಭೀರವಾಗಿ ಗಾಯ ಗೊಂಡಿದ್ದು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿಕ್ಕೋಸಹಳ್ಳಿ ಗ್ರಾಮದ ಪ್ರವೀಣ ಅಲಿಯಾಸ್ ಗಣೇಶ,ಪುನೀತ್, ರಾಜೇಗೌಡ, ಚಂದ್ರೇಗೌಡ, ನಾಗೇಗೌಡ, ಶಶಿ, ಕಿರಣ್, ಚರಣ್, ಮೀನಾಕ್ಷಮ್ಮ, ಸುಶ್ಮಿತಾ, ಗಣೇಶ ಎಂಬುವವರು ಹಲ್ಲೆ ಮಾಡಿದ ಆರೋಪಿಗಳಾಗಿದ್ದು ಇವರಲ್ಲಿ ಮೂವರನ್ನು ವಶಕ್ಕೆ ಪಡೆದಿರುವ ಖಾಕಿ ಉಳಿದವರಿಗಾಗಿ ತೀವ್ರ ಶೋಧ ನಡೆಸುತ್ತಿದೆ.
ಘಟನೆ ವಿವರ:
ಗ್ರಾಮದಲ್ಲಿ ಗ್ರಾಮ ದೇವತೆ ಹಬ್ಬ ನಡೆಯುತ್ತಿದ್ದ ಕಾರಣಕ್ಕೆ ಆಹಾರ ಸಾಮಗ್ರಿಗಳ ತರಲು ಪೇಟೆಗೆ ತೆರಳಿದ್ದ ಹಲ್ಲೆಗೊಳಗಾದವರು ಮರಳಿ ಆಟೋದಲ್ಲಿ ಬರುತ್ತಿದ್ದ ವೇಳೆ ಚಿಕ್ಕೋಸಹಳ್ಳಿ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್ ಹತ್ತಿರ ಆಟೋವನ್ನು ಅಡ್ಡಗಟ್ಟಿದ ಪ್ರವೀಣ್(ಗಣೇಶ), ಪುನೀತ್, ರಾಜೇಗೌಡ ಮತ್ತಿತರರು ಆಟೋದಲ್ಲಿದ್ದ ಪ್ರಸನ್ನ,ಸತೀಶ್,ಸಿ.ಎಸ್.ದೇವರಾಜು,ಯೋಗೇಶ್,ಸೌಂದರ್ಯ ಅವರುಗಳ ಮೇಲೆ ಮಚ್ಚು,ದೊಣ್ಣೆ ಮತ್ತು ಕಲ್ಲಿನಿಂದ ತಲೆ,ಮುಖ,ಕೈ,ಕಾಲುಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಸೌಂದರ್ಯ,ಪ್ರಸನ್ನ,ಸತೀಶ್,ಸಿ.ಎಸ್.ದೇವರಾಜು,ಯೋಗೇಶ್\ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪೇಟೆ ಟೌನ್ ಠಾಣೆಯ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದ 11ಮಂದಿಯ ಪೈಕಿ ಪ್ರವೀಣ್, ಪುನೀತ್ ಹಾಗೂ ರಾಜೇಗೌಡ ಎಂಬುವವರನ್ನು ಬಂಧಿಸಿದ್ದು,ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
————–ಶ್ರೀನಿವಾಸ್ ಕೆ ಆರ್ ಪೇಟೆ