ಬೇಲೂರು-ಮನೆಗೆ ಅಕ್ಕಿ ಸಾಮಗ್ರಿ ತರಲಿಲ್ಲವೇ ಎಂದು ಕೇಳಿದ ಪತ್ನಿಯನ್ನೇ ಕೊಂದು ಮುಗಿಸಲು ಮುಂದಾಗಿದ್ದ ನಗರದ ಶಿವಜ್ಯೋತಿ ನಗರ ನಿವಾಸಿ ಪಾಜಿಲ್ ಅಹಮದ್ ಎಂಬಾತನಿಗೆ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ನಾಲ್ಕೂವರೆ ವರ್ಷ ಕಾರಾಗೃಹ ಶಿಕ್ಷೆ ಹಾಗು 12 ಸಾವಿರ ರೂ.ದಂಡ ಮತ್ತು 2 ಲಕ್ಷ ರೂ.ಪರಿಹಾರವನ್ನು ಪತ್ನಿಗೆ ನೀಡುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.
ಪಾಜಿಲ್ ಅಹಮದ್ ,ಪತ್ನಿ ರಜಿಯಾ ಬಾನು ಅವರಿಗೆ ನಿರಂತರ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದ.2016 ಸೆ.16 ರಂದು ಮನೆಗೆ ಬಂದ ಪತಿಯನ್ನು ಮನೆಯಲ್ಲಿ ಅಡುಗೆ ಮಾಡಲು ಸಾಮಗ್ರಿಗಳಿಲ್ಲ ನೀವು ತರಲಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹೊಟ್ಟೆ ಹಾಗು ಬಲಗೈ ರಟ್ಟೆಗೆ ಇರಿದಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೇಲೂರು ಠಾಣೆ ಪೊಲೀಸರು ಐಪಿಸಿ ಕಲಂ 498(ಎ), 307 ಹಾಗು 504, 326ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ನ. 20ರಂದು ಶಿಕ್ಷೆ ಪ್ರಕಟಿಸಿದ್ದಾರೆ.ಸರ್ಕಾರದ ಪರವಾಗಿ ಕೆ.ಎಸ್.ನಾಗೇಂದ್ರ ವಾದ ಮಂಡಿಸಿದರು.