ಚಿಕ್ಕಮಗಳೂರು-ಪ್ರಕೃತಿಯನ್ನು ಹಾಳು ಮಾಡುತ್ತ ತಾನು ನಾಶವಾಗಿ ಹೋಗುತ್ತಿರುವ ಮಾನವ-ಆರ್‌.ಟಿ.ಓ ಅಧೀಕ್ಷಕ ಪ್ರಹ್ಲಾದ್

ಚಿಕ್ಕಮಗಳೂರು-ಮಾನವ ತನ್ನ ವೈಯಕ್ತಿಕ ಆಸೆ,ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಪ್ರಕೃತಿದತ್ತ ವನಸಿರಿಯನ್ನು ಹಾಳುಗೆಡುವ ಮೂಲಕ ಆರೋಗ್ಯ ಬದುಕಿಗೆ ತಾನಾಗಿಯೇ ಕುತ್ತು ತಂದೊಡ್ಡಿಕೊಳ್ಳುತ್ತಿದ್ದಾನೆಂದು ಆರ್‌.ಟಿ.ಓ ಕಚೇರಿ ಅಧೀಕ್ಷಕ ಪ್ರಹ್ಲಾದ್ ಹೇಳಿದರು.

ನಗರದ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ಧ ವಾಯುಮಾಲಿನ್ಯ ನಿಯಂತ್ರಣ ಕುರಿತ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರವೂ ಉಳಿಯಬೇಕು. ಜೀವವೂ ಉಳಿಯಬೇಕು. ಹಾಗಾಗಿ ಚಾಲಕರು ಹೊಗೆರಹಿತ ವಾಹನ ಚಲಾಯಿಸಲು ಮುಂದಾಗಬೇಕು. ಸುಸ್ಥಿತಿಯಲ್ಲಿರುವ ವಾಹನಗಳನ್ನು ಮಾತ್ರ ರಸ್ತೆಗೆ ತರಬೇಕು. ವಾಹನಗಳಿಗೆ ಕಲಬೆರಕೆ ಇಂಧನ ಬಳಸದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.

ಮನುಷ್ಯರ ಆರೋಗ್ಯ ಹದಗೆಟ್ಟರೆ ವೈದ್ಯರಲ್ಲಿಗೆ ಹೋಗುತ್ತೇವೆ. ಹಾಗೆಯೇ ವಾಹನಗಳು ಕೆಟ್ಟರೆ ಮೆಕಾನಿಕ್ ಬಳಿಗೆ ಹೋಗಿ ದುರಸ್ಥಿಪಡಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ವಾಹನಗಳ ಎಮಿಷನ್ ಟೆಸ್ಟ್ ಮಾಡಿಸಬೇಕು. ಕಲಬೆರಕೆ ಇಂಧನ ಅಥವಾ ಎಂಜಿನ್ ಕೆಟ್ಟಿದ್ದರೆ ಹೊಗೆ ಅಧಿಕವಾಗಿ ಪರಿಸರ ಕೆಡುತ್ತದೆ ಎಂದು ಎಚ್ಚರಿಸಿದರು.

ಕಾಲೇಜು ಪ್ರಾಂಶುಪಾಲೆ ಹಸೀನಾ ಭಾನು ಮಾತನಾಡಿ, ಯುವಸಮೂಹ ಜಾಗೃತರಾದರೆ ಬದಲಾವಣೆ ಸಾಧ್ಯ. ಪ್ರಕೃತಿ ಉಳಿದರೆ ಮಾನವರು ಉಳಿಯಲು ಸಾಧ್ಯ.ಸಾಮಾಜಿಕ ಕಾಳಜಿ ಸಾಮಾಜಿಕ ಜವಬ್ದಾರಿಯಿಂದ ಯಾರು ಕರ್ತವ್ಯ ನಿಭಾಯಿಸುವರು ಅವರು ಮಾತ್ರ ಆರೋಗ್ಯವಾಗಿ ಬದುಕಲು ಸಾಧ್ಯ ಎಂದರು.

ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪರಿಕರ ಸಾಮಾಗ್ರಿ, ಪುಸ್ತಕಗಳು, ಕ್ರೀಡಾಸಾಮಾಗ್ರಿ, ಪ್ರಮಾಣಪತ್ರ ಹಾಗೂ ಸ್ಮರಣಿಕೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂಧಿಗಳಾದ ದೇವರಾಜ್, ತೇಜಸ್, ತಾಂತ್ರಿಕ ಸಹಾಯಕರ್ ಸಂತೋಷ್, ಗೃಹರಕ್ಷಕದಳದ ಸಂದೀಪ್ ಹಾಜರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಕು.ಖುಷಿ ನಿರೂಪಿಸಿದರು. ಕು.ಅನನ್ಯ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಹಂಚಲಾಯಿತು.

————-ಸುರೇಶ್

Leave a Reply

Your email address will not be published. Required fields are marked *

× How can I help you?