ಅರಕಲಗೂಡು:ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆ ಓದಿ ಅರ್ಥೈಸಿಕೊಳ್ಳುವುದರ ಜೊತೆಗೆ ಇತರರಿಗೂ ಅದರಲ್ಲಿನ ಮಾಹಿತಿಗಳನ್ನು ಹಂಚಬೇಕು ಎಂದು ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ತಾಲೂಕಿನ ರಾಮನಾಥಪುರ ವಿದ್ಯಾನಿಕೇತನ ಶಾಲೆಯಲ್ಲಿ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಸಂವಿಧಾನ ಪೀಠಿಕೆ ಬೋಧಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನ ಪ್ರಪಂಚದಲ್ಲಿಯೇ ಅತ್ಯುನ್ನತವಾಗಿದ್ದು ಆರ್ಥಿಕ,ಶೈಕ್ಷಣಿಕ ಹಾಗೂ ರಾಜಕೀಯವಾಗಿ ಎಲ್ಲ ವರ್ಗದ ಜನತೆಗೆ ಸಮಾನವಾದ ಹಕ್ಕು ಮತ್ತು ಸಾಮಾಜಿಕ ನ್ಯಾಯ ಒದಗಿಸಲಾಗಿದೆ.ಇಂತಹ ಶ್ರೇಷ್ಠ ಸಂವಿಧಾನವನ್ನು ಅಂಗೀಕರಿಸಿದ ಮಹತ್ವದ ದಿನ ಸಂವಿಧಾನ ಪೀಠಿಕೆ ಓದುವುದರಿಂದ ಮಕ್ಕಳಿಗೆ ಪ್ರೇರಣೆ ಯಾಗಲಿದೆ ಎಂದರು.
ರಕ್ತದಾನ ಮಾಡುವುದರಿಂದ ಆರೋಗ್ಯ ಕೆಡಲಿದೆ ಎನ್ನುವುದು ತಪ್ಪು ಕಲ್ಪನೆ.ಇದರಿಂದ ಬೇರೊಬ್ಬರ ಜೀವ ಉಳಿಸಬಹುದು,ಹೀಗಾಗಿ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಕಾರ್ಯದರ್ಶಿ ಮಾದಾಪುರ ಕೃಷ್ಣೇಗೌಡ,ಖಜಾಂಚಿ ಸಿದ್ದರಾಮೇಗೌಡ, ವಿದ್ಯಾನಿಕೇತನ ಸಂಸ್ಥೆಯ ಅಧ್ಯಕ್ಷ ವಿರೂಪಾಕ್ಷ,ತಾಪಂ ಮಾಜಿ ಸದಸ್ಯ ಎಂ.ಟಿ.ಪಾಂಡುರಂಗ,ನಿವೃತ್ತ ಪ್ರಾಂಶುಪಾಲ ಬಸವರಾಜು ಇತರರು ಇದ್ದರು.
—————-ಶಶಿಕುಮಾರ್ ಕೆಲ್ಲೂರು