ಅರಕಲಗೂಡು:ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ನ. 29ರಂದು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಂತೋಷ್ ಶಣವಿನಕುಪ್ಪೆ ಮಾಹಿತಿ ನೀಡಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಗೊಳಿಸಿರುವ ಅವರು,ಪುರಾತನ ಕಾಲದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ ಶಿಥಿಲಗೊಂಡಿದ್ದರಿಂದ ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ನೂತನ ದೇವಾಲಯ ಸ್ಥಾಪಿಸಿ ಉದ್ಘಾಟನೆ ಭಾಗ್ಯ ಕಂಡು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಾರ್ಷಿಕ ಮಹೋತ್ಸವ ಏರ್ಪಡಿಸಲಾಗಿದೆ.ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಸಹಕರಿಸಿದ ಸಮಾಜ ಸೇವಕರಾದ ಸಿ.ಡಿ. ದೇವಾಕರಗೌಡ, ಸಿಂಗನಕುಪ್ಪೆ ಸುರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ರುದ್ರಾಭಿಷೇಕ,ವಿಶೇಷ ಪೂಜೆ,ಮಹಾ ಮಂಗಳಾರತಿ ಹಾಗೂ ಕಾರ್ತಿಕ ದೀಪೋತ್ಸವ ನಡೆಯಲಿದೆ.ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಗುವುದು.ಸಂಜೆ ಸಂಗೀತ ರಸಮಂಜರಿ ಮತ್ತು ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
—————–ಶಶಿಕುಮಾರ್ ಕೆಲ್ಲೂರು