ತಿಪಟೂರು-ನಗರದ ಸಿಡ್ಲೇಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದಲ್ಲಿ ಆಯೋಜಿತವಾಗಿದ್ದ ಲಿಂಗೈಕ್ಯ ಜಗದ್ಗುರು ಪಟ್ಟದ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳ 114ನೇ ಸಂಸ್ಮರಣೆ ಹಾಗೂ ಪೂಜ್ಯರ 27ನೇ ಪೀಠಾರೋಹಣ ಧಾರ್ಮಿಕ ಸಮಾರಂಭದಲ್ಲಿ ಗಾಂಧೀಜಿ ಸಹಜ ಬೇಸಾಯ ಆಶ್ರಮದ ಯುವ ಕೃಷಿ ವಿಜ್ಞಾನಿ ಹೆಚ್.ಮಂಜುನಾಥ್ ರವರಿಗೆ ಗುರುಕುಲಶ್ರೀ ಗೌರವ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ವಿಜ್ಞಾನಿ ಹೆಚ್.ಮಂಜುನಾಥ್ ಅವರು,ವಿಷಮುಕ್ತ ಆಹಾರಕ್ಕಾಗಿ ರಾಸಾಯನಿಕ ಮುಕ್ತ ಕೃಷಿ ಅವಲಂಬನೆ ಅನಿವಾರ್ಯವಾಗಿದ್ದು ಕುಲಾಂತರಿ ತಳಿ ನಿಷೇಧದ ಬಗ್ಗೆ ಜನಾಂದೋಲನ ರೂಪಿತವಾಗಬೇಕಿದೆ ಎಂದು ತಿಳಿಸಿದರು.
ಬಿರುದು ಸನ್ಮಾನವನ್ನು ಸ್ವೀಕರಿಸುವಾಗ ನನ್ನ ಮನಸ್ಸು ಕಿಂಚಿತ್ತು ಕಸಿವಿಸಿಗೊಳ್ಳದೆ, ಪ್ರಶಾಂತವಾಗಿ, ಉಲ್ಲಾಸದಿಂದ ಹೀಗೆ ಹೇಳಿಕೊಳ್ಳುತ್ತಿತ್ತು “ಈ ಬಿರುದು, ಸನ್ಮಾನ ಆಶ್ರಮದ ಎಲ್ಲಾ ನನ್ನ ಸಹಪಾಠಿಗಳಿಗೆ, ದೊಡ್ಡಹೊಸೂರು ಸತ್ಯಾಗ್ರಹಿಗಳಿಗೆ, ನನ್ನನ್ನು ತಿದ್ದಿ ತೀಡಿದ ಗುರುಗಳಿಗೆ, ನನ್ನನ್ನು ಹೊತ್ತು ಹೆತ್ತು ಬೆಳೆಸಿದ ಅಮ್ಮ ಅಪ್ಪ ಅಣ್ಣ ಅತ್ತಿಗೆಯರಿಗೆ.. ನನ್ನನ್ನು ಇಷ್ಟು ವರುಷ ಸಹಿಸಿಕೊಂಡಿರುವ ಹೆಂಡತಿ – ಮಗಳಿಗೆ.. ನನ್ನ ಹರುಕಲು ಕನ್ನಡವನ್ನು ದಿನನಿತ್ಯ ತಿದ್ದುತ್ತಿರುವ ಶಶಿಕುಮಾರ ರಶ್ಮಿ ನಿಸರ್ಗಳಿಗೆ.. ಅಂತಿಮವಾಗಿ, ನನ್ನ ಮನಸ್ಸನ್ನು ಗೆದ್ದು, ಜೀವನದಲ್ಲಿ ಎಲ್ಲವೂ ನಶ್ವರವೆಂದು ತೋರಿಸಿಕೊಟ್ಟ ಬುದ್ಧನಿಗೆ:ಯಾರಿಂದ ಏನನ್ನೂ ಬಯಸದೆ ಕಾಯಕ ಮಾಡುವುದನ್ನು ಹೇಳಿಕೊಟ್ಟ ಬಸವನಿಗೆ ಚಳುವಳಿಯ ರೂಪುರೇಷೆಗಳು ಮತ್ತು ಜೀವನದ ಮೌಲ್ಯಗಳನ್ನು ತಿಳಿಸಿದ ಗಾಂಧಿಯ ಪಾದಗಳಿಗೆ ಅರ್ಪಿತವಾಗಲಿ.. ನಾನು ಅವರ ಪ್ರತಿನಿಧಿಯಷ್ಟೇ, ಇಲ್ಲಿ ನನ್ನದೇನೂ ಇಲ್ಲ, ನಾ – ನಗಣ್ಯವಷ್ಟೇ..” ಎಂದರು.