ಗೋಣಿಬೀಡು:ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡಿಗರಾಗದೆ ವರ್ಷದ ಎಲ್ಲಾ ತಿಂಗಳು ಕನ್ನಡ ಭಾಷೆಯ ಮೇಲಿನ ಪ್ರೀತಿ, ಆಭಿಮಾನ,ವಿಶ್ವಾಸ ಇರಿಸಿಕೊಂಡರೆ ಕನ್ನಡದ ಗೌರವಕ್ಕೆ ಧಕ್ಕೆಯುಂಟಾಗುವುದಿಲ್ಲ ಎಂದು ಗೋಣೀಬೀಡು ಪೋಲೀಸ್ ಠಾಣೆಯ ಪಿ.ಎಸ್.ಐ ಹರ್ಷವರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗುರುವಾರ ಪಟ್ಟಣದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿoದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಕನ್ನಡ ಅತ್ಯುತ್ತಮ ಭಾಷೆ ಎಂದು ಬಿರುದು ಪಡೆದುಕೊಂಡಿದೆ. ಕರ್ನಾಟಕದ ವಿವಿಧ ಬಾಗಗಳಲ್ಲಿ ವಿವಿಧ ರೀತಿಯ ಶೈಲಿಯಲ್ಲಿ ಕನ್ನಡ ಮಾತನಾಡುತ್ತಿದ್ದರೂ ಅದೆಲ್ಲವೂ ಮನಸ್ಸಿಗೆ ಮುದ ನೀಡುವಂತಹುದೇ ಆಗಿದೆ. ಭಾಷೆಯ ಮೇಲಿನ ಹಿಡಿತ ಸಾಧಿಸಬೇಕೆಂದಿದ್ದರೆ ಸಾಹಿತ್ಯಾತ್ಮಕವಾಗಿ ಭಾಷೆ ಕಲಿಯಬೇಕು. ಕನ್ನಡದಲ್ಲಿರುವ ಕಥೆ,ಕಾವ್ಯ, ಸಾಹಿತ್ಯ, ಕಾದಂಬರಿ ಸೇರಿದಂತೆ ವಿವಿಧ ರೀತಿಯ ಪುಸ್ತಕಗಳನ್ನು ಹಾಗೂ ದಿನಪತ್ರಿ ಕೆಗಳನ್ನು ಓದುವುದರಿಂದ ಭಾಷೆಯ ಮೇಲಿನ ಪಾಂಡಿತ್ಯ ಹೆಚ್ಚುತ್ತದೆ ಎಂದರು.
ಗ್ರಾಮೀಣ ಜನರ ಆಡುಭಾಷೆ ಕೇಳಲು ನಿಜಕ್ಕೂ ಬಹಳ ಸೊಗಸಾಗಿರುತ್ತದೆ.ಇಂತಹ ಶ್ರೀಮಂತ ಭಾಷೆಯನ್ನು ಉಳಿಸಲು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಾಗೂ ಕನ್ನಡ ಪರ ಸಂಘಟನೆಗಳು ಅವಿರತ ಪ್ರಯತ್ನ ಪಡುತ್ತಿ ರುವುದರಿಂದ ಕನ್ನಡದ ಘನತೆ ಇನ್ನೂ ಹೆಚ್ಚಿದೆ ಎಂದು ತಿಳಿಸಿದರು.
ಗೋಣಿಬೀಡು ಗ್ರಾ.ಪಂ.ಅಧ್ಯಕ್ಷ ಜಿ.ಎಸ್.ದಿನೇಶ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡದ ಜೊತೆಗೆ ತುಳು, ಕೊಂಕಣಿ,ಬ್ಯಾರಿಭಾಷೆ,ಕೊಡವ ಮತ್ತು ಅರೆಭಾಷೆ ಸೇರಿಸಂತೆ ಹಲವು ಭಾಷೆಗಳನ್ನು ಬಳಸುತ್ತಿದ್ದರೂ ಸಾರ್ವಜನಿಕವಾಗಿ ಎಲ್ಲರೂ ಕನ್ನಡವನ್ನೇ ಬಳಸುತ್ತಾರೆ. ಸರ್ಕಾರದ ಸುತ್ತೋಲೆ, ಗೆಜೆಟ್ ಪ್ರಕಟಣೆ ಸೇರಿದಂತೆ ಆದೇಶಪತ್ರಗಳೆಲ್ಲವೂ ಕನ್ನಡದಲ್ಲಿ ಮುದ್ರಣಗೊಳ್ಳುತ್ತಿರುವುದರಿಂದ ಕನ್ನಡಿಗರು ತಮ್ಮ ಸ್ವಂತ ಭಾಷೆಯಲ್ಲಿ ಓದಿಕೊಳ್ಳಲು ಸಾಧ್ಯವಾಗುತ್ತಿದೆ. ಇನ್ನು ಕೆಲ ಇಲಾಖೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ನಿತ್ಯದ ವ್ಯವಹಾರಗಳನ್ನು ಕನ್ನಡದಲ್ಲಿ ನಡೆಸದೆ ಆಂಗ್ಲ ಭಾಷೆಯಲ್ಲಿ ನಡೆಸುತ್ತಿದ್ದು ಇದು ಸರಿಯಲ್ಲ.ಗ್ರಾಮೀಣ ಭಾಗದ ಜನ ಆಂಗ್ಲ ಭಾಷೆಯ ಜ್ಞಾನ ಹೆಚ್ಚಾಗಿ ಹೊಂದಿರುವುದಿಲ್ಲ.ಹಾಗಾಗಿ ಕರ್ನಾಟಕದ ಎಲ್ಲ ಕಛೇರಿ, ಸಂಸ್ಥೆಗಳಲ್ಲು ಕನ್ನಡ ಬಳಸಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಣೀಬೀಡು ಪಿಎಸ್‌ಐ ಹರ್ಷವರ್ಧನ್ ಅವರನ್ನು ಸನ್ಮಾನಿಸಲಾಯಿತು.
ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಪೂರ್ಣೇಶ್, ಗ್ರಾ.ಪಂ.ಸದಸ್ಯ ಆನಂದ, ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ , ವರ್ತಕರ ಸಂಘದ ಕಾರ್ಯದರ್ಶಿ ಪರಮೇಶ್,ಸ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಳ, ಶಿಕ್ಷಕರಾದ ಶಶಿಕಲಾ, ಜಗದೀಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪ್ರವೀಣ್ ಮತ್ತಿತರರಿದ್ದರು.
ವರದಿ: ವಿಜಯಕುಮಾರ್.ಟಿ.ಮೂಡಿಗೆರೆ.