ನಾಗಮಂಗಲ:ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿ,ಸದ್ಯ ಕೀಲು ಮತ್ತು ಮೂಳೆ ತಜ್ಞರಾಗಿರುವ ಡಾ.ಡಿ.ಎಸ್.ವೆಂಕಟೇಶ್ ಅವರು ಆಸ್ಪತ್ರೆಯ ಆರೋಗ್ಯರಕ್ಷಾ ಸಮಿತಿ ಹಾಗೂ ಆಯುಷ್ಮಾನ್ ಯೋಜನೆಯ ಸುಮಾರು 83 ಲಕ್ಷ ರೂ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು,ಅವರನ್ನು ಈ ಕೂಡಲೇ ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಕರುನಾಡ ಸೇವಕರು ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಕಳೆದ ಎರಡು ವರ್ಷಗಳಿಂದ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ. ಡಿ.ಎಸ್. ವೆಂಕಟೇಶ್ ವ್ಯಾಪಕವಾಗಿ ಭ್ರಷ್ಟಾಚಾರ ನಡೆಸಿ ಸುಮಾರು 83 ಲಕ್ಷ ರೂಪಾಯಿಗು ಹೆಚ್ಚಿನ ಮೌಲ್ಯದ ಅಕ್ರಮ ಎಸಗಿದ್ದಾರೆ.ತಾಲ್ಲೂಕು ವೈದ್ಯಾಧಿಕಾರಿಗಳಿಗೆ 40 ಸಾವಿರದವರಿಗೆ ಮಾತ್ರ ಹಣವನ್ನು ವೆಚ್ಚ ಮಾಡುವ ಅಧಿಕಾರವನ್ನಷ್ಟೇ ಸರಕಾರ ನೀಡಿದೆ. ಆದರೆ ಆ ನಿಯಮವನ್ನು ಗಾಳಿಗೆ ತೂರಿ 83 ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ಔಷಧಿ ಹಾಗೂ ಸರ್ಜಿಕಲ್ ಉಪಕರಣಗಳು ಮತ್ತು ಇನ್ನಿತರ ಸಿವಿಲ್ ಕಾಮಗಾರಿಗಳ ಹೆಸರಿನಲ್ಲಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದರು.
ಆಸ್ಪತ್ರೆಗೆ ಅಗತ್ಯ ಇರುವ ಔಷಧಿಗಳನ್ನು ರಾಜ್ಯ ಸರ್ಕಾರ ಪೂರೈಸುತ್ತದೆ. ಔಷಧಿಗಳು ಕೊರತೆ ಕಂಡು ಬಂದಲ್ಲಿ ವಾರ್ಷಿಕ ಅಗತ್ಯತೆಯ ಅನುಸಾರವಾಗಿ ಟೆಂಡರ್ ನಡೆಸಿ ಅಗತ್ಯ ಔಷಧಿಗಳನ್ನು ಪಡೆಯಬೇಕು.
ಇದಕ್ಕಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ವ್ಯವಹರಿಸಬೇಕು.ಆದರೆ ಸರ್ಕಾರದ ಆದೇಶವನ್ನು ಗಣನೆಗೆ ತೆಗೆದುಕೊಳ್ಳದ ಡಾ.ವೆಂಕಟೇಶ್ ತಾವು ಒಳ ಒಪ್ಪಂದ ಮಾಡಿಕೊಂಡಿರುವ ಸರ್ಜಿಕಲ್ ಏಜೆನ್ಸಿಗಳಿಗೆ ಪ್ರತ್ಯೇಕವಾಗಿ 99 ಸಾವಿರ ರೂಪಾಯಿಗಳ ಕೋಟೆಷನ್ ನೀಡಿದ್ದಾರೆ.
ಈ ಕೋಟೆಷನ್ ಗಳನ್ನು ಯಾವುದೇ ಪತ್ರಿಕೆಗಳಿಗೆ ಜಾಹೀರಾತು ನೀಡಿರುವುದಿಲ್ಲ. ವ್ಯಾಪಕವಾಗಿ ಪ್ರಚಾರವನ್ನು ಸಹ ನಡೆಸುವುದಿಲ್ಲ.ಬದಲಾಗಿ ತಮಗೆ ಹೆಚ್ಚು ಕಮೀಷನ್ ನೀಡುವ ಔಷಧ ಏಜೆನ್ಸಿಗಳಿಗೆ ಕಾರ್ಯಾದೇಶ ನೀಡುವ ಸಲುವಾಗಿ ಒಂದೆರಡು ಡಮ್ಮಿ ಏಜೆನ್ಸಿಗಳು ಕೋಟೆಷನ್ ಸಲ್ಲಿಸುವಂತೆ ಮಾಡಿ ತಮಗೆ ಬೇಕಾದವರಿಗೆ ಸರಬರಾಜು ಆದೇಶವನ್ನು ಮಾಡಿದ್ದಾರೆ.
ವಾಸ್ತವದಲ್ಲಿ ಈ ಪ್ರಮಾಣದ ಔಷಧಿಗಳನ್ನು ಖರೀದಿಸಿಲ್ಲ, ಬದಲಿಗೆ ಔಷಧಿ ಖರೀದಿಸಿದಂತೆ ನಕಲಿ ರಸೀದಿಗಳನ್ನು ಸೃಷ್ಟಿಸಿ ತಾಲ್ಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಒಂದು ತಾಜಾ ಉದಾಹರಣೆ ಎಂದರೆ 2024 ನೇ ವರ್ಷದ ಜನವರಿ ತಿಂಗಳ ದಿನಾಂಕ 17 ರಂದು ಆಸ್ಪತ್ರೆಗೆ 97 ಸಾವಿರದ 350 ರೂಪಾಯಿ ಮೌಲ್ಯದ 30 ಡಸ್ಟ್ ಬೀನ್ ಗಳನ್ನು ಮೆಡಿಪ್ಲಸ್ ಎಂಬ ಏಜೆನ್ಸಿಯಿಂದ ಪಡೆಯಲಾಗಿದ್ದು, ಅದೇ ಜನವರಿ ತಿಂಗಳ 22ರಲ್ಲಿ ಪುನಃ ಅದೇ ಏಜೆನ್ಸಿಯಿಂದ ಮತ್ತೆ 97 ಸಾವಿರದ 350 ರೂಪಾಯಿಗಳ ವೆಚ್ಚದಲ್ಲಿ ಡಸ್ಟ್ ಬೀನ್ ಗಳನ್ನು ಪಡೆದಂತೆ ನಕಲಿ ರಸೀದಿಗಳನ್ನು ಸೃಷ್ಟಿಸಿ ಹಣವನ್ನು ಲಪಟಾಯಿಸಿದ್ದಾರೆ.ಕೇವಲ ಐದು ದಿನಗಳ ಅಂತರದಲ್ಲಿ ಈ ಅವ್ಯವಹಾರವನ್ನು ನಡೆಸಲಾಗಿದೆ.
ಈ ಎರಡು ಖರೀದಿಯನ್ನು ಒಟ್ಟುಗೂಡಿಸಿ ಟೆಂಡರ್ ಮೂಲಕ ವಸ್ತುಗಳನ್ನು ಪಡೆಯುವ ಅವಕಾಶ ಇದ್ದರೂ ಕೂಡ ಖರೀದಿಸಿದಂತೆ ತೋರಿಸಿ ನಕಲಿ ರಸೀದಿಯ ಮೂಲಕ ಸರ್ಕಾರದ ಹಣವನ್ನು ಲಪಟಾಯಿಸಿದ್ದಾರೆ ಎಂದರು.
ಡಾ.ವೆಂಕಟೇಶ್ ಅವರು ಸರ್ಕಾರದ ಕೆ.ಟಿ.ಪಿ.ಪಿ.ನಿಯಮಗಳನ್ನು ಉಲ್ಲಂಘನೆ ಮಾಡಿ ಸಿವಿಲ್ ಕಾಮಗಾರಿಗಳನ್ನು ನಡೆಸಿದ್ದಾರೆ.ಆಸ್ಪತ್ರೆಗೆ ಬಹಳಷ್ಟು ಔಷಧಗಳು,ಸರ್ಜಿಕಲ್ ಉಪಕರಣಗಳು ಮತ್ತು ಪೀಠೋಪಕರಣಗಳು ವಾಸ್ತವವಾಗಿ ಸರಬರಾಜು ಆಗಿಲ್ಲ.
ಆದ್ದರಿಂದ ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಡಾ.ಡಿ.ಎಸ್. ವೆಂಕಟೇಶ್ ಅವರನ್ನು ಅಮಾನತ್ತುಗೊಳ್ಳಿಸಿ 83 ಲಕ್ಷ ರೂಪಾಯಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡರು.
———–ರವಿ ಬಿ.ಹೆಚ್