ಕೆ.ಆರ್.ಪೇಟೆ-ಕನ್ನಡಿಗರು ತೋರಿಕೆಗಾಗಿ ನವೆಂಬರ್ ಕನ್ನಡಿಗರಾಗದೆ ಗಾಢವಾದ ಕುಂಭಕರ್ಣ ನಿದ್ರೆಯಿಂದ ಎದ್ದು, ಕನ್ನಡ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನದ ಜೊತೆಗೆ ಸ್ವಾಭಿಮಾನ ಬೆಳೆಸಿಕೊಂಡು ವರ್ಷಪೂರ್ತಿ ಕನ್ನಡತನ ಮೆರೆಯಬೇಕು ಎಂದು ಪಟ್ಟಣದ ಮಹಿಳಾ ಸರ್ಕಾರಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರತಿಮಾ ಕರೆ ನೀಡಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ಕೃಷ್ಣ ಸರ್ಕಾರಿ ಎಂಜಿನಿಯರಿoಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಯು ವಿಶ್ವದಲ್ಲಿಯೇ ಅತೀ ಹೆಚ್ಚಿನ ಜನರು ಮಾತನಾಡುವ ಜೀವಂತ ಭಾಷೆಗಳಲ್ಲಿ ಒಂದಾಗಿದ್ದು ಶ್ರೀಮಂತ ಭಾಷೆಯಾಗಿದೆ. ಕನ್ನಡಿಗರಿಗೆ ನಮ್ಮ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಇರುವ ನಿರಭಿಮಾನವೇ ಕನ್ನಡ ಭಾಷೆಯ ಅಭಿವೃದ್ಧಿಗೆ ತೊಡಕಾಗಿದೆ.ಕನ್ನಡಿಗರಾದ ನಾವು ಕನ್ನಡ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಿ ಕಣ ಕಣದಲ್ಲಿಯೂ ಕನ್ನಡತನವನ್ನು ಮೈಗೂಡಿಸಿಕೊಂಡು ಕನ್ನಡದ ನೆಲದಲ್ಲಿ ವಾಸಮಾಡುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಮಾಡಬೇಕು. ಕನ್ನಡದ ಕವಿಗಳು, ಸಾಹಿತಿಗಳು ಹಾಗೂ ಕನ್ನಡದ ಏಕೀಕರಣಕ್ಕಾಗಿ ಹೋರಾಟ ಮಾಡಿ, ದುಡಿದ ಮಹನೀಯರ ಜೀವನ ಸಾಧನೆ ಯನ್ನು ತಿಳಿದುಕೊಂಡು ನಮ್ಮ ಮಕ್ಕಳು ಹಾಗೂ ವಿದ್ಯಾರ್ಥಿ ಗಳಿಗೆ ಕನ್ನಡದ ಹಿರಿಮೆ ಗರಿಮೆಯ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಹಾಗೂ ಯುವ ಜನರು ಕನ್ನಡ ದಿನಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಂಡು ಲೋಕಜ್ಞಾನದ ಜೊತೆಗೆ ನಮ್ಮ ನೆಲದ ಇತಿಹಾಸದ ಬಗ್ಗೆ ತಿಳಿದುಕೊಂಡು ಸಾಧನೆ ಮಾಡಬೇಕು ಎಂದು ಡಾ.ಪ್ರತಿಮಾ ತಿಳಿಸಿದರು.
ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿರುವ ಭವಿಷ್ಯದ ಎಂಜಿನಿಯರುಗಳಾದ ನೀವು ನಮ್ಮ ನೆಲದ ಇತಿಹಾಸದ ಬಗ್ಗೆ ಅರಿವು ಮೂಡಿಸಿಕೊಂಡು ಹೆಜ್ಜೆ ಹಾಕಿದಾಗ ಮಾತ್ರ ಸಾಧನೆ ಮಾಡಲು ದಾರಿಯು ಸುಗಮವಾಗುತ್ತದೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು.
ನಮ್ಮ ಕನ್ನಡ ನೆಲದಲ್ಲಿ ವಾಸ ಮಾಡುತ್ತಿರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸಿಕೊಡುವ ಕೆಲಸ ಮಾಡಿದಾಗ ಮಾತ್ರ ಕನ್ನಡವನ್ನು ಶಕ್ತಿಯುತವಾಗಿ ಕಟ್ಟಲು ಸಾಧ್ಯವಿದೆ ಎಂಬ ಸತ್ಯ ತಿಳಿಯ ಬೇಕು ಎಂದು ಕಿವಿ ಮಾತು ಹೇಳಿ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಮ್ಮು-ಕಾಶ್ಮೀರದ ವಿದ್ಯಾರ್ಥಿಯಿಂದ ಕನ್ನಡ ಮಾತನಾಡಿಸಿ ವಿದ್ಯಾರ್ಥಿ ಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಕೃಷ್ಣ ಸರ್ಕಾರಿ ಎಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್ ಕನ್ನಡ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ಜಿಲ್ಲೆಯು ಕನ್ನಡ ಭಾಷೆಯನ್ನೇ ಉಸಿರಾಗಿಸಿಕೊಂಡಿರುವ ಶ್ರೀಮಂತ ಜಿಲ್ಲೆಯಾಗಿದೆ. ಮಂಡ್ಯ ಜಿಲ್ಲೆಯ ಜನರಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆಯ ಬಗ್ಗೆ ಸ್ವಲ್ಪವೂ ಗೊತ್ತಿಲ್ಲ. ಕನ್ನಡತನದ ಸಂಸ್ಕೃತಿಗೆ ಮತ್ತೊಂದು ಹೆಸರೇ ಮಂಡ್ಯ, ಮಂಡ್ಯ ಎಂದರೆ ಇಂಡಿಯಾ, ಇದೇ ನಮ್ಮ ನೆಲದ ಮಣ್ಣಿನ ತಾಕತ್ತು ಎಂದು ದಿನೇಶ್ ಅಭಿಮಾನದಿಂದ ಹೇಳಿದರು.
ಕೃಷ್ಣರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಡಿಸೇಂಬರ್ ತಿಂಗಳ 20, 21 ಹಾಗೂ 22ರಂದು ಮಂಡ್ಯ ನಗರದಲ್ಲಿ ನಡೆಯಲಿರುವ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕ, ಯುವತಿಯರು ಕಡ್ಡಾಯವಾಗಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ರುದ್ರೇಶ್, ಡಾ. ನಾಗಪ್ಪ ಭಜಂತ್ರಿ, ಡಾ.ಅರುಣ ಕುಮಾರ್, ಡಾ.ಹರೀಶ್, ಪ್ರೊಫೆಸರ್ ನಂದೀಶ್, ಕಾಲೇಜಿನ ರಿಜಿಸ್ಟಾರ್ ಮಂಜುನಾಥ್ ಉಪಾಧ್ಯಾಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಂಜಿನಿಯರಿoಗ್ ವಿದ್ಯಾರ್ಥಿನಿ ಹೊಸಹೊಳಲು ದೀಪ್ತಿ ಮತ್ತು ತಂಡದ ವಿದ್ಯಾರ್ಥಿನಿಯರು ನೀಡಿದ ಭರತನಾಟ್ಯ ಪ್ರದರ್ಶನ ವು ಗಮನ ಸೆಳೆಯಿತು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಭೋಧಕರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು.
——————ವರದಿ-ಶ್ರೀನಿವಾಸ್ ಕೆ ಆರ್ ಪೇಟೆ