ಕೊರಟಗೆರೆ:-ತಿಮ್ಮನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು,ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ಎಂದು ಗ್ರಾಮದ ಮುಖಂಡರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿಯ ತೀತಾ ಗ್ರಾಪಂ ವ್ಯಾಪ್ತಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮೂರು ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ.
ಗೊರವನಹಳ್ಳಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು,ಪಕ್ಕದಲ್ಲಿಯೇ ಎರಡು ದೇವಸ್ಥಾನ, ಅಂಗನವಾಡಿ,ಶುದ್ದಕುಡಿಯುವ ನೀರಿನ ಘಟಕ ಇದ್ದು,ನೀರಿನ ಘಟಕಕ್ಕೆ ಮಹಿಳೆಯರು ಹಾಗೂ ಮಕ್ಕಳು ಬರುವ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಗಳು ಸುಖಾಸುಮ್ಮನೆ ಅವ್ಯಾಚ ಶಬ್ದಗಳನ್ನ ಬಳಸಿ ನಿಂದಿಸುತ್ತಾರೆ ಎಂದು ಗ್ರಾಮಸ್ಥರು ಅಹವಾಲು ತೋಡಿಕೊಂಡರು.
ಮಾಜಿ ಗ್ರಾಪಂ ಸದಸ್ಯ ಕೆಂಪಣ್ಣ ಮಾತನಾಡಿ, ಗ್ರಾಮದ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅನೇಕ ಬಾರಿ ಅಬಕಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಅಂಗಡಿಗಳಲ್ಲಿ ಮದ್ಯ ಮಾರಾಟವನ್ನ ನಿಲ್ಲಿಸದಿದ್ದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಗ್ರಾಮಸ್ಥರಾದ ನರಸಿಂಹರಾಜು ಮಾತನಾಡಿ, ನಮ್ಮ ಗ್ರಾಮದ ದೇವಸ್ಥಾನದ ಬಳಿ ಇರುವ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಮದ್ಯದ ಚಟಕ್ಕೆ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ.ಕೆಲಸ ಮಾಡಿದ ಹಣವೆಲ್ಲ ಕುಡಿದು ಸಂಸಾರ ನಡೆಸಲು ಕಷ್ಟ ಪಡುತ್ತಿದ್ದಾರೆ.ಅಬಕಾರಿ ಅಧಿಕಾರಿಗಳು ಕಂಡರೂ ಕಾಣದಂತೆ ಹೋಗುತ್ತಾರೆ.ಇನ್ನಾದರೂ ಅಧಿಕಾರಿಗಳು ನಮ್ಮ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಇಲ್ಲದೆ ಹೋದಲ್ಲಿ ಮಹಿಳೆಯರು ಹಾಗು ಮಕ್ಕಳಾದಿಯಾಗಿ ಅಬಕಾರಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಗಂಭೀರ ಎಚ್ಚರಿಕೆಯನ್ನು ನರಸಿಂಹರಾಜು ನೀಡಿದರು.
——–ವರದಿ-ಶ್ರೀನಿವಾಸ್ ಕೊರಟಗೆರೆ