ತುಮಕೂರು:ದಿವಾಳಿಯಾಗಿರುವ ಕಾಂಗ್ರೆಸ್ ಸರಕಾರದಿಂದ ಕೇಂದ್ರ ಸರಕಾರದ ಕಾಮಗಾರಿಗಳ ‘ಶಂಕುಸ್ಥಾಪನೆ-ಉದ್ಘಾಟನೆ’-ಶಾಸಕ ಬಿ.ಸುರೇಶ್‌ಗೌಡ ಟೀಕೆ

ತುಮಕೂರು:ಡಿಸೆಂಬರ್ 2ರಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳು ಹಾಗೂ ಗಣಿಗಾರಿಕೆಯ ಅಭಿವೃದ್ಧಿಯ ಅನುದಾನದ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆ ಇಲ್ಲ.ಅಧಿಕಾರದ ಕೊನೆಯ ದಿನಗಳನ್ನು ಎಣಿಸುತ್ತಿರುವ ಸಿದ್ದರಾಮಯ್ಯನವರು ಅಸ್ತಿತ್ವ ಉಳಿಸಿಕೊಳ್ಳಲು ನಡೆಸುತ್ತಿರುವ ಬೋಗಸ್ ಕಾರ್ಯಕ್ರಮ ಇದು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 1259 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿರುವ ಅನುದಾನ ಎಷ್ಟಿದೆ? ದಿವಾಳಿಯಾಗಿ ಜನರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರ,ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳಿಗೆ ಚಾಲನೆ ನೀಡಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿದೆ ಎಂದರು.

ಡಿಸೆoಬರ್ 2ರಂದು ಮುಖ್ಯಮಂತ್ರಿಗಳು ಚಾಲನೆ ನೀಡುತ್ತಿರುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ 252 ಕೋಟಿ ರೂ.ಗಳ ಯೋಜನೆ ಕೇಂದ್ರ ಸರ್ಕಾರದ ಅಮೃತ್ ಯೋಜನೆ, ಜೊತೆಗೆ ಗಣಿಗಾರಿಕೆಯ ಅಭಿವೃದ್ಧಿ ಅನುದಾನದಲ್ಲಿ ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಶಿರಾ, ತಿಪಟೂರು, ತುಮಕೂರು ಮತ್ತು ತುರುವೇಕೆರೆ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಗಣಿಗಾರಿಕೆ ಹಣದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರದ ಕೊಡುಗೆ ಇಲ್ಲ ಎಂದು ಸುರೇಶ್‌ಗೌಡ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ,ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಹಳ್ಳಿಗಳಿಂದ ಜನರನ್ನು ಕರೆತರಲು ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಹೊಣೆ ಹೊರಿಸಿದ್ದಾರೆ. 750 ಬಸ್‌ಗಳ ಮೂಲಕ ಜನರನ್ನು ಕರೆತರಲು ಅದರ ವೆಚ್ಚವನ್ನು 15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನ ಹೊರತುಪಡಿಸಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಸ್ವಂತ ಸoಪನ್ಮೂಲದಿoದ ನಿಯಮಾನುಸಾರ ಭರಿಸಲು ಅನುಮೋದನೆ ನೀಡಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ದಿಲೀಪ್‌ಕುಮಾರ್, ಗುಬ್ಬಿ ನಾಗರಾಜು, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಜೆ.ಜಗದೀಶ್ ಪತ್ರಿಕಾಗೋಷ್ಠಿಯಲ್ಲಿದ್ದರು.

ವರದಿ-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?