ಹೊಳೆನರಸೀಪುರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಕೆಲಸ ಪಡೆದುಕೊಳ್ಳುವುದು ಸುಲಭದ ಕೆಲಸವಲ್ಲ. ಯಾವುದೇ ಇಲಾಖೆಯಲ್ಲಿ ನೂರಿನ್ನೂರು ಕೆಲಸಕ್ಕೆ ಅರ್ಜಿ ಆಹ್ವಾನಿಸಿದರೆ ಹತ್ತಾರು ಸಾವಿರ ಅರ್ಜಿಗಳು ಬರುತ್ತವೆ. ಇವರೆಲ್ಲರ ನಡುವೆ ಯಾರು ಅತ್ಯುತ್ತಮ ಅಂಕ, ಸಮಾನ್ಯ ಜ್ಞಾನ,ಉತ್ತಮ ನಡವಳಿಕೆ ಹೊಂದಿರುತ್ತಾರೋ ಅವರಿಗೆ ಯಶಸ್ಸು ಸಿಗುತ್ತದೆ. ಇಂತಹ ಯಶಸ್ಸು ಗಳಿಸಲು ಉತ್ತಮ ಗುರಿಯನ್ನು ಹೊಂದಿದ್ದು ಗುರು ಹಿರಿಯರು ತೋರಿದ ದಾರಿಯಲ್ಲಿ ನಡೆದರೆ ಯಶಸ್ಸು ನಿಶ್ಚಿತ ಎಂದು ಹಿಂದುಳಿದ ವರ್ಗಗಳ ಅಧಿಕಾ ರಿ ಬಿ.ಕೆ. ಹರೀಶ್ ಅಭಿಪ್ರಾಯಪಟ್ಟರು .
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ಇರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿದ್ದು ವ್ಯಾಸಂಗ ಮಾಡಿ ಪೊಲೀಸ್ ಇಲಾಖೆಗೆ ಆಯ್ಕೆಯಾದ ತಾಲ್ಲೂಕಿನ ಮೂಡಲ ಮಾಯಗೌಡನ ಹಳ್ಳಿಯ ಎಂ.ಎಸ್.ಶಂಕರೇಗೌಡ, ಹಾಸನ ತಾಲ್ಲೂಕಿನ ಮುಕುಂದೂರು ಗ್ರಾಮದ ಎಂ.ಜಿ. ಮನೋಜ್, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಂಬಳೂರು ಗ್ರಾಮದ ಪುನೀತ್ ಅವರನ್ನು ಸನ್ಮಾನಿಸಿ ಶುಭ ಹಾರೈಸಿ ಮಾತನಾ ಡುತ್ತಾ, ಸರ್ಕಾರ ವಿದ್ಯಾಥಿಗಳ ಸರ್ವತೋಮುಖ ಅಭಿವೃದ್ದಿಗೆ ಪ್ರಾಥಮಿಕ ಹಂತದಿಂದ ಸ್ನಾತಕೋತರ ಪದವಿ ವರೆಗೆ ಹಲವು ಹತ್ತು ಸೌಲಭ್ಯ ಗಳು , ಉಚಿತ ಹಾಸ್ಟೆಲ್ ಸೌಲಭ್ಯ ಎಲ್ಲವನ್ನೂ ನೀಡಿದೆ. ಇಂತಹ ಅವಕಾಶಗಳು ಇರುವಾಗ ಪೋಷಕರಿಗೆ ಹೊರೆ ಆಗದಂತೆ ಅತ್ಯುತ್ತಮ ವ್ಯಾಸಂಗ ಮಾಡಬಹುದು.ವಿದ್ಯಾರ್ಥಿ ಜೀವನದಲ್ಲಿ ಓದಿಗೆ ಹೆಚ್ಚಿನ ಮಹತ್ವ ನೀಡಿದ್ದರಿಂದ ನಮ್ಮ ಹಾಸ್ಟೆಲ್ಲಿನ ಮೂವರು ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ ಎಂದರು .
ವಿದ್ಯಾರ್ಥಿ ಜೀವನದಲ್ಲಿ ಓದುವುದನ್ನು ಬಿಟ್ಟು ಬೇರೆ ಆಕರ್ಷಣೆಗಳಿಗೆ ಬಲಿಯಾದರೆ ನಿಮ್ಮ ಮುಂದಿನ ಜೀವನ ಬಲಿ ಆಗು ತ್ತದೆ. ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಿದರೆ ಮುಂದಿನ ಬದುಕು ಸುಖವಾಗಿರುತ್ತದೆ ಎಂದರು . ನಿಲಯ ಮೇಲ್ವಿಚಾರಕ ಚಂದ್ರಯ್ಯ ಹಾಗೂ ಹಾಸ್ಟಲ್ಲಿನ ಸಹಪಾಟಿಗಳು ಕೆಲಸ ಪಡೆದುಕೊಂಡ ಮೂವರಿಗೆ
ಶುಭಹಾರೈಸಿದರು.
———-—ವಸಂತ್ ಕುಮಾರ್