ಮಧುಗಿರಿ-ಹೃದಯಾಘಾತದಿಂದ ಮರಣ ಹೊಂದಿದ ಐ.ಡಿ.ಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶಿವರಾಂರೆಡ್ಡಿ(74) ರವರ ನೇತ್ರಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.
ನೇತ್ರಗಳನ್ನು ಸಂಗ್ರಹಿಸಿದ ಮಧುಗಿರಿಯ ಶ್ರೀ ವರದಾಯಿನಿ ನೇತ್ರ ಸಂಗ್ರಹಣ ಕೇಂದ್ರದ ಗಾಯತ್ರಿನಾರಾಯಣ್ ಮಾತನಾಡಿ,ಮಾನವನಿಗೆ ಶೇ 70ರಷ್ಟು ಗ್ರಹಿಕೆ ಕಣ್ಣಿನ ಮೂಲಕವೇ ಆಗುತ್ತದೆ.ಆ ಮೂಲಕವೇ ಬುದ್ಧಿಶಕ್ತಿಯ ವಿಕಾಸವೂ ಆಗುತ್ತದೆ.ಇಂದಿಗೂ ನಮ್ಮ ದೇಶದಲ್ಲಿ ಲಕ್ಷಾಂತರ ಮಂದಿ ದೃಷ್ಟಿ ಹೀನರು ಏನನ್ನೂ ನೋಡಲಾಗದೆ ಅಸಹಾಯ ಕತೆಯಿಂದ ದಿನ ಕಳೆಯುತ್ತಿದ್ದಾರೆ.ಅಂತಹ ಎರಡು ಜನರ ಪಾಲಿಗೆ ಶಿವರಾಂರೆಡ್ಡಿ ರವರ ಕುಟುಂಬದವರು ಬೆಳಕಾಗುವ ಕೆಲಸ ಮಾಡಿದ್ದಾರೆ.
ಮನುಷ್ಯ ಸತ್ತ ನಂತರ ಅವರ ಬಹುಮುಖ್ಯ ಅಂಗಾಗಂಗಗಳನ್ನು ದಾನ ಮಾಡುವುದರಿಂದ ಒಂದಷ್ಟು ಜನರ ಬದುಕುಗಳು ಹಸನಾಗುತ್ತವೆ.ಅವರ ಸಾವಿನ ಬಳಿಕವೂ ಅವರನ್ನು ಜೀವಂತವಾಗಿಡಬಹುದು.ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಯೋಚಿಸುವಂತಾಗಬೇಕು ಎಂದರು.
ದೊಡ್ಡಬಳ್ಳಾಪುರದ ಅಭಿಷೇಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನೇತ್ರದಾನ ಮಾಡುತ್ತಾರೆಂಬ ಮಾಹಿತಿ ನಮಗೆ ದೊರೆಯಿತು. ಮೃತರಿಂದ ಸಂಗ್ರಹಿಸಿದ ನೇತ್ರಗಳನ್ನು ಬೆಂಗಳೂರಿನ ಡಾ.ರಾಜಕುಮಾರ್ ನೇತ್ರದಾನ ಕೇಂದ್ರಕ್ಕೆ ಕಳುಹಿಸಿ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
——————ಸುರೇಶ್ ಬಾಬು ಎನ್ ಮಧುಗಿರಿ.