ಸಕಲೇಶಪುರ:ತಾಲ್ಲೂಕಿನ ದೇವಾಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಬೀಡು- ಕುಮಾರಹಳ್ಳಿ ಸೇರಿದಂತೆ ಸುಮಾರು 10 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಬಿದ್ದು ಹಾಳಾಗಿದ್ದು ಪ್ರಯಾಣಿಕರು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಪಶ್ಚಿಮಘಟ್ಟದ ಅಂಚಿನಲ್ಲಿ ಇರುವ ನೀಕನಹಳ್ಳಿ,ಅತ್ತಿಬೀಡು,ಕುಮಾರಳ್ಳಿ,ಬಾಣಿಬೈಲು,ಬೆಟ್ಟಮಕ್ಕಿ,ನೆಲಗಳ್ಳಿ,ಹುತ್ತನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು,ಲಘು ವಾಹನಗಳಿರಲಿ ಭಾರಿ ವಾಹನಗಳ ಓಡಾಟವು ಸಾಧ್ಯವಾಗದ ಮಟ್ಟಿಗೆ ರಸ್ತೆ ಹದಗೆಟ್ಟಿದೆ.
ಈ ಗ್ರಾಮಗಳಲ್ಲಿ ಬಹುತೇಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳೇ ವಾಸ ಮಾಡುತ್ತಿದ್ದು ನಮ್ಮ ಬಳಿ ಓಡಾಡಲು ಖಾಸಗಿ ವಾಹನಗಳಿಲ್ಲ.ಕೆ ಎಸ್ ಆರ್ ಟಿ ಸಿ ಬಸ್ಸುಗಳು ಒಂದೆರಡು ಬರುತ್ತವೆಯಾದರು ಅವು ಸಹ ಗುಂಡಿಬಿದ್ದ ರಸ್ತೆಯ ಕಾರಣಕ್ಕೆ ಕೆಟ್ಟು ನಿಲ್ಲುತ್ತವೆ.ಆಟೋಗಳಾಗಲಿ ಬೇರೆ ಬಾಡಿಗೆ ವಾಹನಗಳಾಗಲಿ ಈ ರಸ್ತೆಯಲ್ಲಿ ಬರುವ ಸಾಹಸಕ್ಕೆ ಕೈ ಹಾಕುವುದಿಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಹಾಗು ಆಸ್ಪತ್ರೆಗಳಿಗೆ ಹೋಗಬೇಕಾದ ರೋಗಿಗಳಿಗೆ ತೀವ್ರ ಅನಾನುಕೂಲಗ ಳಾಗುತ್ತಿವೆ ಎಂದು ಈ ರಸ್ತೆಯಲ್ಲಿ ದಿನನಿತ್ಯ ಕೆಲಸದ ನಿಮಿತ್ತ ಓಡಾಡುವ ಎಚ್.ವೈ. ಪ್ರಕಾಶ್ ಹುತ್ತನಹಳ್ಳಿ
ಅಳಲು ತೋಡಿಕೊಂಡಿದ್ದಾರೆ.
ಆದಷ್ಟು ಶೀಘ್ರ ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ರಸ್ತೆಯೊಂದನ್ನು ನಿರ್ಮಾಣ ಮಾಡಿಕೊಡಬೇಕಾಗಿ ಅವರು ಆಗ್ರಹಿಸಿದ್ದಾರೆ.
———-ರಕ್ಷಿತ್ ಎಸ್ ಕೆ