ಚಿಕ್ಕಮಗಳೂರು-ಯುಗದಕವಿ ಕುವೆಂಪು ರಚಿಸಿರುವ ಕನ್ನಡದ ರೈತ ಹಾಗೂ ನಾಡ ಗೀತೆಗಳು ವಿಶ್ವಮಾನ್ಯವಾದುದು. ಭಾಷೆಯ ಹಾಗೂ ನಾಡಿನ ಸೌಂದರ್ಯವನ್ನು ಗೀತೆಗಳ ಸಾಲುಗಳಲ್ಲಿ ಬಣ್ಣಿಸಿ ಭಾಷೆಯ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಸಿರಿಗನ್ನಡವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಹೇಳಿದರು.
ತಾಲ್ಲೂಕಿನ ಕಡವಂತಿ ಗ್ರಾಮದಲ್ಲಿ ಕಡವಂತಿ ಗ್ರಾ.ಪಂ,ಸಿರಿಗನ್ನಡ ವೇದಿಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ಶಾಸನಗಳು, ಓಲೆಗರಿಗಳಲ್ಲಿ ಕವಿಪುಂಗರು ಹಳೆಗನ್ನಡವನ್ನು ಉಳಿಸಿದ್ದಾರೆ.ತದನಂತರ ಕ್ರಿ.ಶ.12ನೇ ಶತಮಾನದಿಂದ ಬಸವಾದಿ ಶರಣರು, ಕೀರ್ತನೆಕಾರರು ಹಾಗೂ ವಚನಾಕಾರರು ತಮ್ಮದೇ ಶೈಲಿಯಿಂದಲೇ ಕನ್ನಡ ಭಾಷೆಗೆ ಪುಷ್ಠಿ ನೀಡುವ ಮೂಲಕ ಬೆಳವಣಿಗೆಗೆ ಸಹಕರಿಸಿದ್ದಾರೆ ಎಂದರು.
ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೈಗೂಡಿಸಿಕೊಳ್ಳಲು ಬಾಲ್ಯದಿಂದಲೇ ಕನ್ನಡ ಪುಸ್ತಕಗಳನ್ನು ಅಧ್ಯಯನ ನಡೆಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೇ ಹಿರಿಯರು ಕಟ್ಟಿ ಬೆಳೆಸಿದ ಕನ್ನಡ ಸೊಗಡು,ಸಂಸ್ಕೃತಿ ಹಾಗೂ ಸಂಪ್ರದಾಯ ಭವಿಷ್ಯದಲ್ಲಿ ಉಳಿಸುವ ಮಹತ್ತರ ಕಾರ್ಯವಾಗಬೇಕು ಎಂದು ಹೇಳಿದರು.
ಕಡವoತಿ ಗ್ರಾ.ಪಂ. ಅಧ್ಯಕ್ಷೆ ಕೆ.ಎ.ಧನಲಕ್ಷೀ ಮಾತನಾಡಿ, ಇತ್ತೀಚೆಗೆ ದಿನಗಳಲ್ಲಿ ಮಕ್ಕಳು ಆನ್‌ಲೈನ್‌ಗಳ ಆಟಗಳಲ್ಲಿ ತಲ್ಲೀನರಾಗಿದ್ದಾರೆ. ಕನ್ನಡವೆಂಬ ಮಹಾಸರೋವರನ್ನು ಮುಟ್ಟುವ ನಿಟ್ಟಿನಲ್ಲಿ ಅನಗತ್ಯ ಸಮಯವನ್ನು ವ್ಯರ್ಥಗೊಳಿಸದೇ ವಿದ್ಯಾರ್ಥಿದೆಸೆಯಿಂದಲೇ ಎಲ್ಲವೂ ಗಳಿಸಿಕೊಂಡು ನಾಡಿನ ಪರಂಪರೆಯನ್ನು ಸಮಾಜದಲ್ಲಿ ಎತ್ತಿಹಿಡಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ತಾಲ್ಲೂಕು ಅಧ್ಯಕ್ಷ ಚಂದ್ರಯ್ಯ, ಕನ್ನಡದ ಉಳಿವಿಗಾಗಿ ಕನ್ನಡಿಗರು ಒಂದಾಗಬೇಕು ಎಂದು ಕರೆ ಕೊಟ್ಟರು.
ಇದೇ ವೇಳೆ ಶಾಲೆಯ ಆವರಣದಲ್ಲಿ ಧ್ವಜಾರೋಹಣವನ್ನು ನೆರವೇರಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ ಮಾಡಲಾಯಿತು.ಪುಟ್ಟ ಮಕ್ಕಳ ಛದ್ಮವೇಷ ಗಮನಸೆಳೆಯಿತು.ಮಲೆನಾಡಿನ ಸಿರಿ ಸೊಬಗಿನ ಜೊತೆಗೆ ಕನ್ನಡದ ಕಲರವ ಕನ್ನಡಾಭಿಮಾನಿಗಳಿಗೆ ಮುದ ನೀಡಿತು.
ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕು.ಮೋನಿಕಾ ಮತ್ತು ಸುಗಮ ಸಂಗೀತದಲ್ಲಿ ಆಯ್ಕೆಯಾದ ಕು.ಪ್ರಿಯಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾ.ಕೃ,ಪ,ಸ ಸಂಘದ ಅಧ್ಯಕ್ಷ ಶಿವಶಂಕರ್, ಗ್ರಾ.ಪಂ. ಉಪಾಧ್ಯಕ್ಷ ಕೃಷ್ಣ ಮೂರ್ತಿ, ಸದಸ್ಯರಾದ ವಿನೋದ್, ಭಾಗ್ಯಮ್ಮ, ಗೀತಾ, ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಶ್, ಮುಖ್ಯ ಶಿಕ್ಷಕ ನಾಗರಾಜ್, ಸಾಹಿತಿ ಸುರೇಶ್ ನೇರ್ಲಿಗೆ, ವಿಪತ್ತು ಘಟಕದ ವಾಸು ಪೂಜಾರಿ, ಪಿಡಿಓ ಸಹದೇವ್ , ಕಾರ್ಯದರ್ಶಿ ಗುರುರಾಜ್ ಮತ್ತಿತರರಿದ್ದರು.
——————ಸುರೇಶ್