
ಮೂಡಿಗೆರೆ:ತಾಲೂಕಿನಲ್ಲಿ ಸೋಮವಾರದಿಂದ ಫೆಂಗಲ್ ಚoಡಮಾರುತದ ಪರಿಣಾಮ ಆರಂಭವಾದ ಮಳೆ ಮಂಗಳವಾರವೂ ಮುಂದುವರಿದ್ದಿದ್ದು ಇದರಿಂದ ಕಾಫಿ, ಕಾಳು ಮೆಣಸು, ಭತ್ತ ಸೇರಿದಂತೆ ಇತರೆ ಬೆಳೆಗಳು ನಾಶವಾಗುವ ಹಂತದಲ್ಲಿದ್ದು ಸರ್ಕಾರ ರೈತರ ನೆರವಿಗೆ ಬರಬೇಕೆಂದು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ ಆಗ್ರಹಿಸಿದ್ದಾರೆ.
ಮಂಗಳವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು,ತಾಲೂಕಿನ ಬೈರಾಪುರ, ಸತ್ತಿಗನಹಳ್ಳಿ, ಹೊಸ್ಕೆರೆ, ಗೌಡಹಳ್ಳಿ, ಹಳೇಕೆರೆ, ಗುತ್ತಿ, ಮೂಲರಹಳ್ಳಿ ಉಗ್ಗೇಹಳ್ಳಿ, ತ್ರಿಪುರ ಸೇರಿದಂತೆ ಬಹುತೇಕ ಎಲ್ಲ ಕಡೆಯೂ ಮಳೆಯ ಪ್ರಮಾಣ ತುಸು ಹೆಚ್ಚೇ ಇದೆ.
ಈಗಾಗಲೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಕಾಫಿ, ಕಾಳು ಮೆಣಸು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದ್ದು, ಈಗ ಮತ್ತೆ ಮಳೆ ಪ್ರಾರಂಭಗೊoಡಿದೆ. ಮಳೆ ಇನ್ನೂ 3 ದಿನ ಮುಂದುವೆರೆಯುವ ಸಾಧ್ಯತೆ ಇರುವುದರಿಂದ ಅಲ್ಪ ಸ್ವಲ್ಪ ಉಳಿದಿದ್ದ ಕಾಫಿ ಹಣ್ಣಾಗಿ ಮಣ್ಣುಪಾಲಾಗಲಿದೆ. ಅಲ್ಲದೇ ಗದ್ದೆಯಲ್ಲಿ ಭತ್ತದ ಕುಯ್ಲು ಪ್ರಾರಂಭವಾಗಬೇಕಾಗಿದ್ದು ಮಳೆಯಂದಾಗಿ ಕುಯ್ಲು ಮುಂದೂಡಿದ್ದಾರೆ. ತೋಟಗಳಲ್ಲಿ ಕಾಫಿ ಕುಯ್ಲು ಆರಂಭವಾಗಿದ್ದು ಮಳೆಯಿoದಾಗಿ ಕುಯ್ಲು ಮಾಡಿದ ಕಾಫಿ ಹಣ್ಣು ಒಣಗಿಸಲು ಸಾಧ್ಯವಾಗುತ್ತಿಲ್ಲ. ಕುಯ್ದ ಹಣ್ಣು ಒಣಗಿಸಲು ಕಣಕ್ಕೆ ಹಾಕಿದಲ್ಲಿ ಮಳೆಯಲ್ಲಿ ಕೊಚ್ಚಿಹೋಗುವ ಆತಂಕವಿದೆ. ಈಗಾಗಲೇ ಹಣ್ಣು ಗಿಡದಿಂದ ನೆಲಕ್ಕುರುಳುತ್ತಿದ್ದು ಮಳೆ ಕಡಿಮೆ ಯಾಗುವವರೆಗೂ ಕಾಫಿ ಹಣ್ಣು ಗಿಡದಲ್ಲೇ ಬಿಟ್ಟಲ್ಲಿ ಹಣ್ಣು ಸಂಪೂರ್ಣ ನೆಲಕ್ಕೆ ಉದುರಲಿದೆ. ಕಾಫಿ ಕುಯ್ಲಿನ ನಂತರವೂ ಮಳೆ ಬಿದ್ದಲ್ಲಿ ಗಿಡದಲ್ಲಿ ಹೂವು ಅರಳಿ ಮುಂದಿನ ವರ್ಷದ ಫಸಲಿಗೆ ತೊಂದರೆಯಾಗಲಿದೆ. ಈಗ ಅಡಕೆ ಕೊಯ್ಲು ನಡೆಯುತ್ತಿದ್ದು, ಅದನ್ನು ಒಣಗಿಸಲು ಸಾಧ್ಯವಾಗದಂತಾಗಿದೆ. ಇದರಿಂದ ಬೆಳೆಗಾರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಮಲೆನಾಡು ಭಾಗದ ರೈತರು ಕೃಷಿ ಚಟುವಟಿಕೆ ನಡೆಸುಲು ಹಿಂದೇಟು ಹಾಕುವಂತಾಗಿದೆ. ಇದರ ನಡುವೆ ಸಾಲ ವಸೂಲಿಗಾಗಿ ಬ್ಯಾಂಕ್ಗಳಿoದ ಕೂಡ ರೈತರ ಮೇಲೆ ಒತ್ತಡ ಬೀರುತ್ತಿದ್ದು, ಇದೀಗ ಮತ್ತೆ ಮಳೆ ಆರ್ಭಟದಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿದ್ದು, ಇದುವರೆಗೂ ಎನ್ಡಿಆರ್ಎಫ್ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಳೆಗಾರ ನೆರವಿಗೆ ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
————ವಿಜಯ್ ಕುಮಾರ್ ಟಿ