ಮೈಸೂರು-ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ,ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಡಿಸೆಂಬರ್ 08ರಂದು ಸಂಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಸಮತೆಂತೋ ಮೈಸೂರು ಪ್ರಸ್ತುತ ಪಡಿಸುವ ಏಕವ್ಯಕ್ತಿ ರಂಗಪ್ರಯೋಗ ‘ನೀರ್ಮಾದಳ ಹೂವಿನೊಂದಿಗೆ..’ ಪ್ರದರ್ಶನಗೊಳ್ಳಲಿದೆ.
ಶ್ರೀಮತಿ ಇಂದಿರಾ ನಾಯರ್ ಅವರು ಅಭಿನಯಿಸುತ್ತಿದ್ದು, ನಾಟಕದ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ನಾಡಿನ ಹೆಸರಾಂತ ರಂಗನಿರ್ದೇಶಕರಾದ ಡಾ. ಶ್ರೀಪಾದ ಭಟ್ ಅವರದ್ದು.
ನಾಟಕದ ಕುರಿತು:
ಇದು ಕಮಲಾದಾಸ್ ಅವರ ಬರಹಗಳಿಂದ ಪ್ರೇರಿತಗೊಂಡ ಅವರ ವ್ಯಕ್ತಿಚಿತ್ರ. ಅವರ ಕಾವ್ಯ ಹಾಗ ಬದುಕಿನ ಕತೆಯಿಂದ ರೂಪುಗೊಂಡ ರೂಪಕ. ಕಮಲಾದಾಸ್ ಎಂದರೆ ಅಸೀಮ ಸ್ವಾತಂತ್ರ್ಯದ ಸಂಕೇತ. ಚೌಕಟ್ಟಿನಾಚೆಗಿನ ಜಿಗಿತ, ಸಾಂಪ್ರದಾಯಿಕ ಬದುಕಿನಲ್ಲಿ ಮರಗಟ್ಟಿದ ಮಹಿಳೆಯರ ಕುತೂಹಲ, ಅಂಚಿಗೆ ಒತ್ತಲ್ಪಟ್ಟ ಮಹಿಳೆಯರ ಅದಮ್ಯ ಧನಿ, ಹಸಿವು, ಕಾಮದ ಕುರಿತ ನೇರ ಅಭಿವ್ಯಕ್ತಿಯಿಂದ ಸಮಾಜವನ್ನು ಬೆಚ್ಚಿಬೀಳಿಸಿದ ಬಂಡುಕೋರ ಧೀರತನ, ತುಂಟತನದ ನಟೋರಿಯಸ್ ವ್ಯಕ್ತಿತ್ವ, ಅಸೀಮ ಹುಡುಕಾಟದ ಸಂತೆಯೇ ಈ ‘ನೀರ್ಮಾದಳ ಹೂವಿನೊಂದಿಗೆ..’
ರoಗಾಸಕ್ತರಿಗೆ ಆತ್ಮೀಯ ಸ್ವಾಗತ.ಮಾಹಿತಿಗಾಗಿ 7259537777, 9480468327,9845595505 ಸಂಪರ್ಕಿಸಲು ಕೋರಿದೆ.
ಮಂಡ್ಯರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.