ತುಮಕೂರು:ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಸೃಷ್ಠಿ ಮಾಡಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ವಿರೋಧಿಸಿ ‘ನಮ್ಮ ನೀರು-ನಮ್ಮ ಹಕ್ಕು’ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಎನ್‌ಡಿಎ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಈ ತಿಂಗಳ 7 ಮತ್ತು 8ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ.ಸುರೇಶ ಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ಪ್ರೆಸ್ ಕೆನಾಲ್ ವಿಚಾರದಲ್ಲಿ ಉಂಟಾಗಿರುವ ಹೇಮಾವತಿ ನೀರಿನ ಗೊಂದಲವನ್ನು ಸರ್ಕಾರ ನಿವಾರಣೆ ಮಾಡಬೇಕು. ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದರೂ ಸಹ ಅವರ ಹಠಮಾರಿ ಧೋರಣೆ ಮುಂದುವರೆದಿದೆ,ಹಲವು ಮುಖoಡರ ಹೋರಾಟದ ಫಲವಾಗಿ ಜಿಲ್ಲೆಗೆ ಹೇಮಾವತಿ ನೀರು ಬಂದಿದೆ. ಎಕ್ಸ್ಪ್ರೆಸ್ ಕೆನಾಲ್ ಮೂಲಕ ಈ ನೀರನ್ನು ಕಸಿಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹೋರಾಟ ನಿಲ್ಲುವುದಿಲ್ಲ. ಹೋರಾಟದಲ್ಲಿ ಪ್ರಾಣಹಾನಿ,ಕಾನೂನು ಸುವ್ಯವಸ್ಥೆ ಹಾಳಾದರೆ ಅದಕ್ಕೆ ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿಗಳೇ ಹೊಣೆ ಎಂದು ಎಚ್ಚರಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್‌ನಿಂದ ಜಿಲ್ಲೆಯ ಕುಡಿಯುವ ನೀರಿಗೆ ದೊಡ್ಡಮಟ್ಟದ ತೊಂದರೆಯಾಗುತ್ತದೆ. ನೀರು ತೆಗೆದುಕೊಂಡು ಹೋಗಲು ಭಾರಿ ಗಾತ್ರದ ಪೈಪ್‌ಗಳನ್ನು ಬಳಸಿದರೆ ನಮಗೆ ಹನಿ ನೀರೂ ಉಳಿಯುವುದಿಲ್ಲ. ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಆಗಲು ಬಿಡುವುದಿಲ್ಲ, ಈ ಬಗ್ಗೆ ಅಧಿವೇಶನದಲ್ಲೂ ಹೋರಾಟ ಮಾಡುವುದಾಗಿ ಹೇಳಿದರು.
ಹೇಮಾವತಿ ಜಲಾಶಯದಿಂದ ತುಮಕೂರು ಬ್ರಾಂಚ್ ಕೆನಾಲ್‌ಗೆ 16-17 ಟಿಎಂಸಿ ನೀರು ಹರಿಯುತ್ತದೆ. ಇದರಲ್ಲಿ ಕುಣಿಗಲ್ ಪಾಲಿನ 3 ಟಿಎಂಸಿ ನೀರು ತೆಗೆದುಕೊಂಡು ಹೋಗಲು ಯಾರ ಅಭ್ಯಂತರವಿಲ್ಲ. ಆದರೆ ಪೈಪ್‌ಲೈನ್ ಮೂಲಕ ನೀರು ಹರಿಸುವುದಕ್ಕೆ ವಿರೋಧವಿದೆ. ಈ ತಿಂಗಳ 7 ಮತ್ತು 8ರಂದು ಗುಬ್ಬಿ ತಾಲ್ಲೂಕು ಸಾಗರನಹಳ್ಳಿ ಗೇಟ್ ಬಳಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮಿತ್ರ ಪಕ್ಷಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡು ನoತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ವಿವಿಧ ಮಠಾಧೀಶರು,ರೈತರು, ಪಕ್ಷದ ಕಾರ್ಯಕರ್ತರು, ಸಂಘಸoಸ್ಥೆಗಳ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸುವರು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜೆಡಿಎಸ್ ಮುಖಂಡರಾದ ಗುಬ್ಬಿನಾಗರಾಜು, ಯೋಗಾನಂದ್, ವಿಜಯ್‌ಕುಮಾರ್, ಮುಖಂಡರಾದ ಚಂದ್ರಶೇಖರಬಾಬು, ಬಿಜೆಪಿ ಜಿಲ್ಲಾ ವಕ್ತಾರರಾದ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಮೊದಲಾದವರು ಹಾಜರಿದ್ದರು.
ವರದಿ-ಕೆ.ಬಿ ಚಂದ್ರಚೂಡ