ಆಲ್ದೂರು-ಕಂಚಿಕಲ್ ದುರ್ಗ ರಸ್ತೆ ಅಭಿವೃದ್ಧಿಗೆ ಐವತ್ತು ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಶಾಸಕಿ ನಯನ ಮೋಟಮ್ಮ ತಿಳಿಸಿದರು.
ಗ್ರಾಮದಲ್ಲಿ ಸುಮಾರು ಹನ್ನೆರಡೂವರೆ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡದ ಉದ್ಘಾಟನೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ,ರಸ್ತೆ ಹಾಗು ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಶಾಸಕರ ಗಮನ ಸೆಳೆದರು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅವರು ಸ್ಥಳದಲ್ಲಿಯೇ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವ ಭರವಸೆ ನೀಡಿ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಇಂಜೀನಿಯರ್ ರವರಿಗೆ ಸೂಚಿಸಿದರು.
ಕುಡಿಯುವ ನೀರಿನ ಸಮರ್ಪಕ ಸರಬರಾಜಿಲ್ಲದರ ಬಗೆಗಿನ ದೂರಿಗೆ ಸ್ಥಳೀಯ ಗ್ರಾಮಪಂಚಾಯತಿಯ ಪಿ ಡಿ ಒ ಅವರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ನಿವಾರಿಸಿ ತನಗೆ ವರದಿ ನೀಡುವಂತೆ ತಿಳಿಸಿದರು.
ಕಾಡುಪ್ರಣಿಗಳ ಹಾವಳಿಯ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಅರಣ್ಯ ಸಚಿವರೊಂದಿಗೆ ಮಾತನಾಡಿ ತೊಂದರೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.
ಈ ಸಂದರ್ಭದಲ್ಲಿ ದೊಡ್ಡ ಮಾಗರವಳ್ಳಿ ಗ್ರಾ. ಪಂ.ಅಧ್ಯಕ್ಷೆ ಮೇಘನಾ,ಉಪಾಧ್ಯಕ್ಷೆ ನಂದಿನಿ, ಪಂಚಾಯತಿ ಸದಸ್ಯರುಗಳಾದ ಪೂರ್ಣೇಶ್,ರಾಜು,ಇದ್ರೀಸ್ ಅಹ್ಮದ್,ಮಾಜಿ ಅಧ್ಯಕ್ಷೆ ಚಂಪಾಜಗದೀಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್,ಹೋಬಳಿ ಅಧ್ಯಕ್ಷ ಪೂರ್ಣೇಶ್,ಗ್ರಾ ಪಂ ಅಧಿಕಾರಿಗಳಾದ ದೊಡ್ಡಯ್ಯ,ನಾರಾಯಣ, ಶಿಕ್ಷಕರುಗಳಾದ ಶಿವಕುಮಾರ್,ತೀರ್ಥ, ಹಾಗೂ ರಾಜೇಶ್, ಮುಖಂಡರುಗಳಾದ ರಮೇಶ್ ಗೋಪಾಲ,ರುದ್ರಯ್ಯ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
——————————ಮಧು ದುರ್ಗಾ