ಆಲ್ದೂರು-ತಾರಕಕ್ಕೇರಿದ ಜಮೀನು ವಿವಾದ-ಹಕ್ಕಿಗಾಗಿ ಸಂಘಟನೆಗಳ ಮದ್ಯೆ ತೀವ್ರ ಪೈಪೋಟಿ-ಸಿ.ಟಿ ರವಿಯವರು ಮದ್ಯ ಪ್ರವೇಶಿಸಿದರೆ ಬಗೆಹರಿಯಲಿದೆಯೇ ಸಮಸ್ಯೆ?

ಆಲ್ದೂರು-ಪಟ್ಟಣದ ಹೃದಯ ಭಾಗದಲ್ಲಿರುವ ಜಮೀನೊಂದರ ಹಕ್ಕಿಗಾಗಿ ಒಕ್ಕಲಿಗರ ಸಂಘ ಹಾಗು ದಲಿತ ಸಂಘಟನೆಗಳ ಮದ್ಯೆ ಏರ್ಪಟ್ಟಿದ್ದ ವಿವಾದವೊಂದು ತಾರಕಕ್ಕೆ ಏರಿದ್ದು ಪಟ್ಟಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಗೆ ಕಾರಣವಾಗಿದೆ.

ಹಿಂದೂ ರುದ್ರಭೂಮಿಗೆಂದು ಮೀಸಲಿಟ್ಟಿದ್ದ ಸರ್ವೇ ನಂಬರ್ 108 ರ 2.32 ಎಕರೆ ಜಾಗವು ಈ ವಿವಾದದ ಕೇಂದ್ರ ಬಿಂದುವಾಗಿದ್ದು ದಲಿತ ಸಮುದಾಯದ ಮಹಿಳೆಯೊಬ್ಬರ ಅಂತ್ಯಸಂಸ್ಕಾರವನ್ನು ಆ ಜಾಗದಲ್ಲಿ ನಿನ್ನೆ ನೆರವೇರಿಸಲಾಗಿದ್ದು ಅದು ಜಾತೀ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ.

ಏನಿದು ವಿವಾದ?

ಸರ್ವೇ ನಂಬರ್ 108 ರ 2.32 ಎಕರೆ ಜಮೀನನ್ನು ರುದ್ರಭೂಮಿಗಾಗಿ ಸರಕಾರ ಮೀಸಲಿರಿಸಿತ್ತು.

ಕಳೆದ ಹತ್ತು ವರ್ಷಗಳ ಹಿಂದೆ ಈ ಜಮೀನು ಹಳ್ಳ-ದಿನ್ನೆಗಳಿಂದ ಕೂಡಿದ್ದು ಸ್ಮಶಾನ ನಿರ್ಮಿಸಲು ಯೋಗ್ಯವಾಗಿಲ್ಲವೆಂದು ಅಂದಿನ ತಹಶೀಲ್ದಾರರು ಆದೇಶವೊಂದನ್ನು ನೀಡಿದ್ದರು.ಆ ಆದೇಶದ ಆಧಾರದ ಮೇರೆಗೆ ಗ್ರಾಮ ಪಂಚಾಯತಿ ಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಅದನ್ನು ಒಕ್ಕಲಿಗ ಸಂಘದ ವಿವಿಧ ಅಭಿವೃದ್ಧಿ ಕಾರ್ಯಗಳ ಉಪಯೋಗಕ್ಕಾಗಿ ನೀಡುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು.

ಜಮೀನನ್ನು ತನ್ನ ಸುಪರ್ದಿಗೆ ಪಡೆದುಕೊಂಡ ಒಕ್ಕಲಿಗರ ಸಂಘ ಅಂದಿನ ಕಾಲದಲ್ಲಿಯೇ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ 2.32 ಎಕರೆ ಜಮೀನನ್ನು ಸಮತಟ್ಟು ಮಾಡಿತ್ತು.

ಅಂದಿನಿಂದ ಪ್ರಾರಂಭವಾಗಿದ್ದ ತಿಕ್ಕಾಟ…

ಈ ಜಾಗವನ್ನು ಒಕ್ಕಲಿಗರ ಸಂಘಕ್ಕೆ ನೀಡುವ ಸಂಬಂಧ ಆಲ್ದೂರು ಗ್ರಾಮಪಂಚಾಯತಿ ತೆಗೆದುಕೊಂಡ ನಿರ್ಣಯವನ್ನು ಏಕಪಕ್ಷೀಯ ಹಾಗು ದುರುದ್ದೇಶ ಹೊಂದಿದ ನಿರ್ಧಾರವೆಂದು ವಿರೋಧಿಸಿದ್ದ ದಲಿತಪರ ಸಂಘಟನೆಗಳು, ಜಾಗವನ್ನು ಸ್ಮಶಾನಕ್ಕೆಂದು ಮೀಸಲಿರಿಸಿದ್ದು ಅದನ್ನು ಆ ಉಪಯೋಗಕ್ಕೆ ನಿಗದಿಯಾಗಿಡುವಂತೆ ಸಂಬಂದಿಸಿದ ಇಲಾಖೆಗಳಿಗೆ ಪತ್ರ ಬರೆದು ಗ್ರಾಮ ಪಂಚಾಯತಿಯ ನಿರ್ಣಯದ ವಿರುದ್ಧ ಹೋರಾಟ ನಡೆಸುತ್ತ ಬಂದಿದ್ದವು.

ಈ ಸಂದರ್ಭದಲ್ಲಿಯೇ ಒಕ್ಕಲಿಗರ ಸಂಘ ಆ ಜಾಗವನ್ನು ಸಮತಟ್ಟುಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿತ್ತು.ಆಗ ದಲಿತ ಸಂಘಟನೆಯವರು ಈ ಜಾಗವು ಸ್ಮಶಾನಕ್ಕೆ ಸೇರಿದ್ದು ಎಂದು ತಗಾದೆ ತೆಗೆದು ಅಲ್ಲಿ ಬೋರ್ಡ್ ಒಂದನ್ನು ನೆಡುವ ಪ್ರಯತ್ನವನ್ನು ಮಾಡಿದ್ದವು.ಆ ಸಮಯದಲ್ಲಿ ತಹಶೀಲ್ದಾರರು ಈ ಜಾಗ ಸ್ಮಶಾನಕ್ಕೆ ಯೋಗ್ಯವಲ್ಲ ಎಂದು ನೀಡಿದ್ದ ವರದಿ ಹಾಗು ಗ್ರಾಮಪಂಚಾಯತಿಯ ಆದೇಶದ ಪ್ರತಿಯೊಂದಿಗೆ ಒಕ್ಕಲಿಗರ ಸಂಘ ಈ ಆಸ್ತಿ ಯ ಸಂಪೂರ್ಣ ಹಕ್ಕನ್ನು ನಮಗೆ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿತ್ತು.

ಮೃತದೇಹ ಹೊತ್ತು ತಂದರು…

ತುಡಕೂರಿನಲ್ಲಿರುವ ಸ್ಮಶಾನ ಬಹಳ ದೂರದಲ್ಲಿದ್ದು ಪಟ್ಟಣದಿಂದ ಮೃತದೇಹಗಳನ್ನು ಅಲ್ಲಿಗೆ ಒಯ್ಯಲು ಕಷ್ಟವಾಗುತ್ತದೆ ನಮಗೆ ಇಲ್ಲಿಯೇ ಸ್ಮಶಾನ ಬೇಕು ಎಂದು ಹೋರಾಟಕ್ಕೆ ಇಳಿದಿದ್ದ ದಲಿತ ಪರ ಸಂಘಟನೆಗಳು ನಿನ್ನೆ ಮಹಿಳೆಯೊಬ್ಬರ ಮೃತದೇಹವನ್ನು ವಿವಾದಿತ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡುವ ನಿರ್ಣಯ ಕೈಗೊಂಡು ಆ ಕೆಲಸವನ್ನು ಮಾಡಿ ಮುಗಿಸಿವೆ.

ಈ ಸಂದರ್ಭದಲ್ಲಿ ಎರಡು ಸಮುದಾಯಗಳ ಮದ್ಯೆ ತೀವ್ರ ತಿಕ್ಕಾಟಗಳು ಏರ್ಪಟ್ಟು ಸದ್ಯ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ.

ಪೋಲೀಸರ ವೈಫಲ್ಯವೆಂದ ಒಕ್ಕಲಿಗರ ಸಂಘ…

ಜಾಗದ ವಿವಾದವು ನ್ಯಾಯಾಲಯದಲ್ಲಿರುವ ಕಾರಣದಿಂದ ಅಲ್ಲಿ ಮೃತದೇಹದ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪೋಲೀಸರ ವೈಫಲ್ಯ ಎಂದಿರುವ ಸಂಘದ ಅಧ್ಯಕ್ಷ ಟಿ.ರಾಜಶೇಖರಗೌಡ ಠಾಣಾಧಿಕಾರಿ ಅಕ್ಷಿತಾ ಅವರನ್ನು ಅಮಾನತುಗೊಳಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು,ತಹಶೀಲ್ದಾರ್ ಹಾಗು ಠಾಣಾಧಿಕಾರಿ ಅಕ್ಷಿತಾರವರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದ್ದು ಅಂತ್ಯಸಂಸ್ಕಾರವನ್ನು ತಡೆಯಬೇಕಿದ್ದ ಅಕ್ಷಿತಾ ಅವರ ಬೆಂಬಲಕ್ಕೆ ನಿಂತಿದ್ದಾರೆ.ಅವರು ರಾಜಕಾರಣಿಗಳ ಒತ್ತಡದಿಂದ ಹೀಗೆ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪಿ.ಎಸ್.ಐ ಅಕ್ಷಿತಾರವರು ಒಂದು ಸಮುದಾಯದ ಪರವಾಗಿ ನಿಂತು ಕಾನೂನನ್ನು ದಿಕ್ಕರಿಸಿದ್ದು ಅವರನ್ನು ಅಮಾನತ್ತುಗೊಳಿಸಿ ತನಿಖೆ ನಡೆಸಬೇಕು ಇಲ್ಲವಾದಲ್ಲಿ ಸೋಮವಾರದಂದು ಬ್ರಹತ್ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಇಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರ ಹಾಗಿದ್ದೇವೆ,ನಮ್ಮಲ್ಲಿ ಜಾತೀ ಭೇದಗಳಿಲ್ಲ.ಇದು ಜಮೀನಿನ ಹಕ್ಕಿಗಾಗಿ ನಡೆಯುತ್ತಿರುವ ತಿಕ್ಕಾಟವಾಗಿದ್ದು ಇದಕ್ಕೆ ಯಾವುದೇ ಲೇಬಲ್ಲುಗಳನ್ನು ಅಂಟಿಸಿ ಯಾವುದೇ ಸಮುದಾಯದ ಮೇಲು ಕಳಂಕ ಹೊರಿಸುವ ಕೆಲಸಕ್ಕೆ ಮುಂದಾಗದಂತೆ ಒಂದಷ್ಟು ಜನರಲ್ಲಿ ಟಿ.ರಾಜಶೇಖರಗೌಡ ಮನವಿಯನ್ನು ಮಾಡಿಕೊಂಡಿದ್ದಾರೆ.

ಉಳಿಕೆ ಜಾಗವನ್ನು ಬೇಕಾದರೆ ಅವರಿಗೆ ಕೊಡಲಿ

ಸ್ಮಶಾನದ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ದಲಿತ ಸಂಘರ್ಷ ಸಮಿತಿಯ ಯಲಗೂಡಿಗೆ ಹೊನ್ನಪ್ಪ,ಈ ಜಾಗ ಹಿಂದೆ ಸ್ಮಶಾನಕ್ಕಾಗಿಯೇ ಮೀಸಲಿಟ್ಟುದುದಾಗಿತ್ತು.ಅದನ್ನು ಕಾನೂನು ಬಾಹಿರವಾಗಿ ಗ್ರಾಮ ಪಂಚಾಯತಿ ಒಕ್ಕಲಿಗರ ಸಂಘಕ್ಕೆ ನೀಡುವ ನಿರ್ಣಯವನ್ನು ಕೈಗೊಂಡಿದೆ.

ಆ ನಿರ್ಣಯವನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದು ಯಥಾಸ್ಥಿತಿಯನ್ನು ಕಾಪಾಡುವಂತೆ ನಿರ್ದೇಶನ ನೀಡಿದೆ.ನಾವು ಯಾವ ಜನಾಂಗದ,ಸಂಘದ ವಿರುದ್ದವೂ ಇಲ್ಲ.ನಮ್ಮ ಹಕ್ಕಿಗಾಗಿಯಷ್ಟೇ ನಮ್ಮ ಹೋರಾಟ ಎಂದು ಸ್ಪಷ್ಟ ಪಡಿಸಿದ್ದಾರೆ.

ಆ ಜಾಗವನ್ನು ಸರ್ವೇ ನಡೆಸಿ ಸ್ಮಶಾನಕ್ಕೆ ಮೀಸಲಿದ್ದುದನ್ನು ಯಥಾವತ್ತಾಗಿ ಉಳಿಸಿ ಉಳಿಕೆ ಜಾಗವನ್ನು ಬೇಕಾದರೆ ಯಾರಿಗಾದರೂ ಕೊಡಲಿ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಇಲ್ಲದೆ ಹೋದಲ್ಲಿ ದಲಿತ,ಪ್ರಗತಿಪರ ಸಂಘಟನೆಗಳ ಜೊತೆಗೂಡಿ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವ ಗಂಭೀರ ಎಚ್ಚರಿಕೆಯನ್ನು ಯಲಗೂಡಿಗೆ ಹೊನ್ನಪ್ಪ ನೀಡಿದ್ದಾರೆ.

ಒಟ್ಟಾರೆ ಹಿಂದೂ ಪರ ಹೋರಾಟಗಳಿಗಾಗಿ ದೇಶದಲ್ಲಿಯೇ ಗುರುತಿಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅದೇ ಸಮುದಾಯದ ಜನರ ಮದ್ಯೆ ಸ್ಮಶಾನಕ್ಕಾಗಿ ನಡೆದ ತಿಕ್ಕಾಟವೊಂದು ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಷ್ಟ ಮಟ್ಟದ ರಾಜಕಾರಣಿಯಾಗಿ,ಹಿಂದುತ್ವದ ಮುಖವಾಣಿಯಾಗಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕ ಸಿ.ಟಿ ರವಿಯವರು ಸಹ ಇದೆ ಗ್ರಾಮದವರು.ಈ ವಿವಾದವನ್ನು ಅವರು ಮನಸ್ಸು ಮಾಡಿದರೆ ಚಿಟಿಕೆ ಹೊಡೆಯುವುದರಲ್ಲಿ ಮುಗಿಸಬಹುದು ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ.

—————————-ಮಧು ಕೆ ದುರ್ಗಾ

ಪೂರ್ಣಿಮಾ ಎಂಬ ಮಹಿಳೆಯಿಂದ ದೂರು

ವಿವಾದಿತ ಜಾಗದಲ್ಲಿ ದಲಿತರು ಶವಸಂಸ್ಕಾರಕ್ಕೆ ಮುಂದಾದಾಗ ಈ ಜಾಗದ ವಿಷಯ ನ್ಯಾಯಾಲಯದಲ್ಲಿದೆ ಹಾಗಾಗಿ ಇಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡದಂತೆ ಪೂರ್ಣಿಮಾ ಎಂಬ ಒಕ್ಕಲಿಗ ಸಂಘದ ಪದಾಧಿಕಾರಿಯೊಬ್ಬರು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ಅಕ್ಷಿತರಿಗೂ ಹಾಗು ತಹಶೀಲ್ದಾರರ ಗಮನಕ್ಕೂ ತಂದರು ಎನ್ನಲಾಗಿದೆ.

ಆದರೂ ಶವಸಂಸ್ಕಾರವನ್ನು ತಡೆಯದ ಪೋಲೀಸರ ವರ್ತನೆಯನ್ನು ಖಂಡಿಸಿ ಪೂರ್ಣಿಮಾ ಶವ ಸಂಸ್ಕಾರಕ್ಕೆ ತೆಗೆದಿದ್ದ ಗುಂಡಿಗೆ ಇಳಿದು ಪ್ರತಿಭಟನೆ ನಡೆಸಿದರು.

ಈ ಜಾಗದ ವಿವಾದವು ನ್ಯಾಯಾಲಯದಲ್ಲಿದ್ದು ಅಲ್ಲಿಂದ ತೀರ್ಪು ಏನು ಬರುತ್ತದೆ ಎಂದು ನೋಡಿಕೊಂಡು ಮುಂದುವರೆಯೋಣ.ನ್ಯಾಯಾಲಯ ಸ್ಮಶಾನಕ್ಕೆ ನಿಗದಿ ಪಡಿಸಿ ಆದೇಶ ಹೊರಡಿಸಿದರೆ ನೀವು ಆ ದಿನದಿಂದಲೇ ಶವ ಸಂಸ್ಕಾರ ಮಾಡಿ ಎಂದು ದಲಿತ ನಾಯಕರಲ್ಲಿ ಮನವಿ ಮಾಡಿಕೊಂಡರು ಎನ್ನಲಾಗಿದೆ.

ಆದರೆ ಅಲ್ಲಿದ್ದ ಒಂದಷ್ಟು ಜನ ಆಕೆಯನ್ನು ಗುಂಡಿಯಿಂದ ಎಳೆದು ಹೊರಹಾಕಿ ಹಲ್ಲೆ ನಡೆಸಿದರು ಎಂಬ ಆರೋಪ ಕೇಳಿಬಂದಿದ್ದು ಪೂರ್ಣಿಮಾ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?