ಕೆ.ಆರ್.ಪೇಟೆ-ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ಸಂವರ್ಧನೆಗಾಗಿ ಆಯುಷ್ ಆಯುರ್ವೇಧ ಔಷಧಿಗಳ ಕಿಟ್ಟನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಯಾವುದೇ ಅಡ್ಡ ಪರಿಣಾಮ ಬೀರದೇ ಆರೋಗ್ಯವನ್ನು ಕಾಪಾಡಿ ವಿದ್ಯಾರ್ಥಿಗಳಲ್ಲಿ ಲವಲವಿಕೆ ಹಾಗೂ ಕ್ರಿಯಾಶೀಲತೆಯನ್ನು ತುಂಬುವ ಆಯುರ್ವೇದ ಔಷಧಿಗಳನ್ನು ನಿಯಮಿತವಾಗಿ ಸೇವಿಸಿ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅವರು ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಯದಲ್ಲಿ ಆಯುಷ್ ಇಲಾಖೆ ಹಾಗೂ ಸಮಾಜಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿನಿಯರಿಗೆ ಆಯುಷ್ ಔಷಧಗಳ ಕಿಟ್ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಸಂವರ್ಧನೆಗೊಳಿಸಿ ಕ್ರಿಯಾಶೀಲತೆ ಹಾಗೂ ಲವಲವಿಕೆಯನ್ನು ತುಂಬಲು ನೆರವಾಗುವಂತಹ ಆರೋಗ್ಯ ಚ್ಯವನಪ್ರಾಶ, ಸಿರಿಧಾನ್ಯಗಳ ಮಿಶ್ರಣದ ಮಿಲ್ಲೆಟ್ ಪೌಡರ್, ನೆಲ್ಲಿಕಾಯಿ, ಕೊಬ್ಬರಿಎಣ್ಣೆ ಹಾಗೂ ಭೃಂಗರಾಜ್ ಮಿಶ್ರಣದ ಹೇರ್ ಆಯಿಲ್, ಜಂತುಹುಳು ನಿರೋಧಕ ಮಾತ್ರೆಗಳನ್ನು ಟಿಎಸ್ಪಿ, ಸಿಎಸ್ಪಿ ಅನುದಾನದಲ್ಲಿ ಖರೀದಿ ಮಾಡಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಕ್ಕೆ ಸೇರಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಶಾಸಕ ಮಂಜು ತಿಳಿಸಿದರು.
ವಿದ್ಯಾರ್ಥಿಗಳು ನಮ್ಮ ದೇಶದ ಮುಂದಿನ ಭವಿಷ್ಯದ ನಾಯಕರಾಗಿರುವುದರಿಂದ ತಂದೆ-ತಾಯಿಗಳು ಹಾಗೂ ಗುರು-ಹಿರಿಯರ ಆಸೆ ಮತ್ತು ಕನಸಿಗೆ ಭoಗ ತರದಂತೆ ಶ್ರದ್ಧಾಭಕ್ತಿ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಉನ್ನತ ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಗುರಿಸಾಧನೆ ಮಾಡಬೇಕು.ಪತ್ರಿಕೆಗಳು ಹಾಗೂ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಂಡು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಾಧನೆ ಮಾಡಿ ನಿಮ್ಮ ತಂದೆತಾಯಿಗಳು ಹಾಗೂ ಗುರುಹಿರಿಯರಿಗೆ ಕೀರ್ತಿ ತರಬೇಕು ಎಂದು ಶಾಸಕ ಎಚ್.ಟಿ.ಮಂಜು ಕಿವಿಮಾತು ಹೇಳಿದರು.
ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಆಶಾಲತಾ, ತಾಲೂಕು ಆಯುಷ್ ನೋಡಲ್ ವೈದ್ಯಾಧಿಕಾರಿ ಡಾ.ಲೋಕೇಶ್, ತಜ್ಞ ವೈದ್ಯರಾದ ಡಾ.ಚಂದ್ರಶೇಖರ್, ಡಾ.ಪವಿತ್ರ, ಡಾ.ಯೋಜನ್, ಡಾ.ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.
———–ಶ್ರೀನಿವಾಸ್ ಕೆ.ಆರ್ ಪೇಟೆ