ಬೇಲೂರು-ಜಾನಪದ ಸಂಸ್ಕೃತಿ ಮರೆತರೆ ಬದುಕು ವಿನಾಶ-ತಾಲ್ಲೂಕು ಜಾನಪದ ಪರಿಷತ್ ಕಾರ್ಯಕ್ರಮದಲ್ಲಿ ಡಾ.ಮಹೇಶ್ ಅಭಿಪ್ರಾಯ

ಬೇಲೂರು:-ಆಧುನಿಕತೆಯ ಭರಾಟೆಯಲ್ಲಿಯು ಜಾನಪದ ಸಂಸ್ಕೃತಿ ಇನ್ನೂ ಉಳಿದುಕೊಂಡಿದೆ. ಗ್ರಾಮೀಣ ಜನರ ನಿತ್ಯದ ಬದುಕಿನಲ್ಲಿ ಜಾನಪದ ಹಾಸು ಹೊಕ್ಕಾಗಿದೆ. ನೀರು, ಭೂಮಿ, ಮಣ್ಣು ಎಲ್ಲವನ್ನೂ ಸ್ತುತಿಸುವ ಬದುಕು ಗ್ರಾಮೀಣ ಜನರಲ್ಲಿ ಮನೆ ಮಾಡಿದೆ.ಇಂತಹ ಅಮೂಲ್ಯ ಜಾನಪದ ಸಂಸ್ಕೃತಿಯನ್ನು ಮರೆತರೆ ಬದುಕು ಖಂಡಿತ ವಿನಾಶದ ಕಡೆ ಸಾಗುತ್ತದೆ ಎಂದು ಬೇಲೂರು ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್ ಅಭಿಪ್ರಾಯ ಪಟ್ಟರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘ ಮತ್ತು ತಾಲ್ಲೂಕು ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡ ಮಾಸಿಕ ಉಪನ್ಯಾಸ ಮಾಲಿಕೆಯಡಿಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ನೂರಾರು ಜಾನಪದ ನೃತ್ಯ ಪ್ರಾಕಾರಗಳಿದ್ದು, ಗ್ರಾಮೀಣ ಜನರ ಬದುಕು ಹಾಗೂ ಸಂಸ್ಕೃತಿ ಬಿಂಬಿಸುತ್ತಿವೇ. ಜಾನಪದ ವಿಜ್ಞಾನಕ್ಕಿಂತ ದೊಡ್ಡದು. ಜನ ಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯಬೇಕಾಗಿದೆ.ಟಿವಿ, ಮೊಬೈಲ್‌ ಹಾವಳಿಯಿಂದ ಯುವ ಜನಾಂಗ ಹಾದಿ ತಪ್ಪುತ್ತಿದೆ. ತಂತ್ರಜ್ಞಾನ ಒಳ್ಳೆತನಕ್ಕೆ ಬಳಕೆಗಿಂತ ಕೆಟ್ಟತನಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದೆ.ಹಿಂದೆ ಹಿರಿಯರು ರಚಿಸಿದ ಜಾನಪದ ಕಲೆಯಲ್ಲಿ ಒಗ್ಗಟ್ಟಿನ ಮಂತ್ರವಿದೆ. ಸಾಮಾಜಿಕ ಮೌಲ್ಯಗಳು ಅಡಕವಾಗಿವೆ. ಹೀಗಾಗಿ ಇಂತಹ ಸಾಹಿತ್ಯದ ಬಗ್ಗೆ ಇಂದಿನ ಪೀಳಿಗೆಗೆ ಹೇಳುವ ಕೆಲಸ ಅನಿವಾರ್ಯವಾಗಿದೆ ಎಂದರು.

ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ತತ್ವಪದ, ಶೋಬಾನ ಪದ ಸೇರಿದಂತೆ ಇತರೆ ಹಾಡುಗಾರಿಕೆಗೆ ಪ್ರೋತ್ಸಾಹ ನೀಡಬೇಕಿದೆ ಎಂದ ಅವರು ಇಂಥ ಅಮೂಲ್ಯ ಜಾನಪದ ಸಾಹಿತ್ಯವನ್ನು ಇಡೀ ತಾಲೂಕಿನಲ್ಲಿ ಪರಿಚಯಿಸುವ ಮಹತ್ವಪೂರ್ಣ ಕೆಲಸವನ್ನು ಮಾಡುತ್ತಿರುವ ತಾಲೂಕು ಜಾನಪದ ಅಧ್ಯಕ್ಷರಾದ ವೈ.ಎಸ್ ಸಿದ್ದೇಗೌಡ ಅವರ ಕೆಲಸ ನಿಜಕ್ಕೂ ಅಗಮ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೇಲೂರು ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ತಾಲ್ಲೂಕು ಜಾನಪದ ಪರಿಷತ್ತು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಮಾತನಾಡಿ,ವೃತ್ತಿ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಕೂಡ ವಯೋ ನಿವೃತ್ತಿ ಸಹಜವಾಗಿದೆ, ಇಂತಹ ಸಂದರ್ಭದಲ್ಲಿ ನಿವೃತ್ತಿ ಜೀವನವನ್ನು ವಿವಿಧ ಸಾಮಾಜಿಕ ಮತ್ತು ಜನಪದ ಕೆಲಸಗಳೊಂದಿಗೆ ಕಳೆಯುವ ಮೂಲಕ ಸಮಾಜಕ್ಕೆ ಸಂದೇಶ ನೀಡುವಂತಹ ಕೆಲಸವನ್ನು ಮಾಡಬೇಕಿದೆ. ತಾಲೂಕು ನಿವೃತ್ತ ನೌಕರರ ನೌಕರರ ಸಂಘ ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಯಲ್ಲಿ ವಿಶೇಷ ಉಪನ್ಯಾಸ ಸೇರಿದಂತೆ ಆಟೋಟಗಳು ಮತ್ತು ಸ್ಪರ್ಧೆಗಳನ್ನು ಹಮ್ಮಿಕೊಂಡು ಅವರನ್ನು ಅಭಿನಂದಿಸುವ ಕೆಲಸಗಳನ್ನು ಮಾಡುತ್ತಾ ಬಂದಿದೆ.ಕಳೆದ ತಿಂಗಳಲ್ಲಿ ನಿವೃತ್ತ ನೌಕರರು ಸೇರಿ ಚನ್ನಪಟ್ಟಣದ ಬಳಿಯ ಜಾನಪದ ಲೋಕವನ್ನು ವೀಕ್ಷಣೆ ಮಾಡಿ ಅಲ್ಲಿಂದ ಆದಿಚುಂಚನಗಿರಿ ಮಹಾ ಸಂಸ್ಥಾನವನ್ನು ವೀಕ್ಷಿಸಿ ಬಂದಿದ್ದಾರೆ. ಅಂತವರಿಗೆ ತಾಲೂಕು ಜಾನಪದ ಪರಿಷತ್ತು ವತಿಯಿಂದ ಇಂದು ಅಭಿನಂದನ ಪತ್ರವನ್ನು ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜಾನಪದ ಪರಿಷತ್ತು ಪ್ರಧಾನ ಕಾರ್ಯದರ್ಶಿ ಧನಂಜಯ, ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ಮೊಗಪ್ಪಗೌಡ ಮತ್ತು ಬಸವರಾಜು, ಖಜಾಂಚಿ ಪದ್ಮೇಗೌಡ, ಕಾರ್ಯದರ್ಶಿ ಶೇಷಪ್ಪ, ಸೌಭಾಗ್ಯ ಹಾಜರಿದ್ದ ಸಮಾರಂಭದಲ್ಲಿ ಚುಟುಕು ಕವಿ ಕಿರಣ್ ಕುಮಾರ್ ಚುಟುಕುಗಳನ್ನು ವಾಚಿಸಿದರು.

Leave a Reply

Your email address will not be published. Required fields are marked *

× How can I help you?