ಮಂಡ್ಯ-ಮಾಜಿ ಮುಖ್ಯ ಮಂತ್ರಿ ಎಸ್ ಎಂ ಕೃಷ್ಣ ಅವರ ಅಗಲಿಕೆ ನಮಗೆ ಬಹಳ ನೋವು ತಂದಿದ್ದು, ನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸಂತಾಪ ಸೂಚಿಸಿದರು.
ಅವರು ಇಂದು ಸೋಮನಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತಿಮ ಸಂಸ್ಕಾರದ ಸಂಬಂಧ ಜಿಲ್ಲಾಡಳಿತದಿಂದ ಮಾಡುಕೊಂಡಿರುವ ಸಿದ್ಧತೆ ಪರಿಶೀಲಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯು ಹಲವಾರು ವಿಷಯಗಳಿಗೆ ಹೆಸರುವಾಸಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರ ಹುಟ್ಟು ಮತ್ತು ಬದುಕು ಮಂಡ್ಯ ಜಿಲ್ಲೆಗೆ ದೊಡ್ಡ ಹೆಸರನ್ನು ತಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅವರ ಜೀವನದ ಶಿಸ್ತು, ಮುತ್ಸದಿ ರಾಜಕಾರಣವನ್ನು ಮೆಚ್ಚುವಂತದ್ದಾಗಿದೆ. ಎಸ್ ಎಂ ಕೃಷ್ಣರವರ ಆಡಳಿತದಲ್ಲಿ ಐಟಿ ಬಿಟಿ ಹಾಗೂ ಕೈಗಾರಿಕೆಗೆ ಹೆಚ್ಚು ಒತ್ತು ಕೊಟ್ಟರು, ಉದ್ಯೋಗ ಸೌಧವನ್ನು ನಿರ್ಮಿಸಿದರು, ಕಾವೇರಿ ನೀರಾವರಿ ನಿಗಮ ಮತ್ತು ಚೆಸ್ಕಾಂ ಇಲಾಖೆ ಪ್ರಾರಂಭಿಸಿದರು . ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತರುವುದರ ಜೊತೆಗೆ ಸಾಕಷ್ಟು ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹಲವಾರು ಕೂಲಿ ಕಾರ್ಮಿಕರ ಮಕ್ಕಳಿಗೆ ಊಟ ವಸತಿ ನೀಡುವುದು, ಮೈಸೂರು – ಬೆಂಗಳೂರು ರಸ್ತೆ ನಿರ್ಮಾಣ ಮಾಡಿದವರು.
ಎಸ್ ಎಂ ಕೃಷ್ಣ ಅವರು ಯಾವುದೇ ಒಂದು ಸೀಮಿತ ಕ್ಷೇತ್ರದ ಬಗ್ಗೆ ಯೋಚಿಸದೆ ಇಡೀ ನಾಡಿನ ಜನರಿಗೆ ಒಳಿತು ಮಾಡುವ ದೃಷ್ಟಿಕೋನವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಿದವರು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 2 ಸದನಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.ಅವರ ಇಷ್ಟೆಲ್ಲಾ ಕಾರ್ಯಗಳು ನಮಗೆ ಸ್ಫೂರ್ತಿಯಾಗಿದ್ದು, ಅವರು ಇಂದು ನಮ್ಮನ್ನೆಲ್ಲ ತೊರೆದಿರುವುದು ಬಹಳ ನೋವನ್ನುಂಟು ಮಾಡಿದೆ ಎಂದರು.
—–—ರವಿ ಬಿ.ಹೆಚ್