ಚಿಕ್ಕಮಗಳೂರು:ಬಿಜೆಪಿ ಹಿರಿಯ ಮುಖಂಡ,ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ನುಡಿ ನಮನಗಳ ಮೂಲಕ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಎo.ಕೃಷ್ಣ ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿ,ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಐ.ಕೆ.ಓಂಕಾರೇಗೌಡ,ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಪ್ರಕರಣವನ್ನು ಅಂದು ಮುಖ್ಯ ಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಅತ್ಯಂತ ಗoಭೀರವಾಗಿ ಪರಿಗಣಿಸಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದನ್ನು ನಾವು ಇಲ್ಲಿ ನೆನಪಿಸಲೇಬೇಕು. ನಮ್ಮ ರಾಜಧಾನಿ ಬೆಂಗಳೂರಿಗೆ ಅಭಿವೃದ್ಧಿಯ ಮೂಲಕ ಹೊಸ ರೂಪವನ್ನು ಕೊಡುವುದರೊಂದಿಗೆ ಐಟಿ, ಬಿಟಿ ಕೇಂದ್ರವಾಗಿ ಜಗತ್ತಿನ ಗಮನ ಸೆಳೆಯುವಂತೆ ಮಾಡಿದ್ದ ಕೀರ್ತಿ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ಶ್ರದ್ಧಾಂಜಲಿ ಅರ್ಪಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷಸಿ.ಆರ್.ಪ್ರೇಮಕುಮಾರ್ ಮಾತನಾಡಿ, ಮಾಜಿ ಮುಖ್ಯ ಮಂತ್ರಿ ಎಸ್.ಎo.ಕೃಷ್ಣ ಅವರು ರಾಜ್ಯ ಕಂಡ ಮುಖ್ಯ ಮಂತ್ರಿಗಳಲ್ಲೇ ಅತ್ಯಂತ ಸುಶಿಕ್ಷಿತರು ಎನ್ನಬಹುದು. ಅವರ ದೂರದೃಷ್ಟಿಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯವಾಯಿತು. ಅವರು ಎಂದೂ ಯಾರನ್ನು ಟೀಕಿಸುವ ಪ್ರಯತ್ನ ಮಾಡಲೇ ಇಲ್ಲ. ಅವರೊಬ್ಬ ಅಪರೂಪದ ರಾಜಕಾರಣಿ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೋಟೆ ರಂಗನಾಥ್ ನುಡಿ ನಮನ ಸಲ್ಲಿಸಿ, ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದನ್ನು ಪುರ್ಣಗೊಳಿಸದೆ ವಿರಮಿಸುತ್ತಿರಲಿಲ್ಲ. ಅಂತಹ ಹಟವಾದಿ ಅವರಾಗಿದ್ದರು. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶ್ರದ್ಧಾಂಜಲಿ ಅರ್ಪಿಸಿದರು.
ಜಿಲ್ಲಾ ಬಿಜೆಪಿ ವಿವಿಧ ಮುಂಚೂಣಿ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.