ಹೊಳೆನರಸೀಪುರ:ಸರಕಾರಿ ಆಸ್ಪತ್ರೆಯಲ್ಲಿ ಔಷಧಿಗಳಿಗೆ ‘ಬರ’-ರೋಗಿ ಗಳಿಗೆ ‘ಬರೆ’-ಔಷದಿ ಸರಬರಾಜು ಆಗದೆ ಹೋದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ

ಹೊಳೆನರಸೀಪುರ:ಕೆಲವು ತಿಂಗಳುಗಳ ಹಿಂದೆ ಉತ್ತಮ ಆಸ್ಪತ್ರೆ ಎಂದು ಪ್ರಶಸ್ತಿ ಪಡೆದುಕೊಂಡಿದ್ದ ಸರಕಾರಿ ಆಸ್ಪತ್ರೆಯಲ್ಲಿ ಔಷಧಿ, ಮಾತ್ರೆ,ಇಂಜಕ್ಸನ್,ಗ್ಲೂಕೋಸ್ ದೊರೆಯದೆ ರೋಗಿಗಳಿಗೆ ತೀವ್ರ ತೊಂದರೆ ಆಗಿದೆ.

ಈ ಆಸ್ಪತ್ರೆಯಲ್ಲಿ ಯಾವ ಔಷಧಿಯೂ ಸಿಗದೆ ಎಲ್ಲವನ್ನೂ ಹೊರಗಡೆಗೆ ಬರೆದುಕೊಡುತ್ತಿದ್ದಾರೆ ಎಂದು ರೋಗಿಗಳು ದೂರಿದ್ದಾರೆ.ಹಣ ಇಲ್ಲದ ಬಡವರು ಔಷದಿ ಖರೀಧಿಸಲು ಸಾಧ್ಯವಾಗದೆ ಕಾಯಿಲೆ ಉಲ್ಭಣಗೊಂಡು ಆತಂಕಕ್ಕೆ ಒಳಗಾಗಿದ್ದಾರೆ.ಇಲ್ಲಿ ಐವಿ ಫ್ಲೂಯಿಡ್, ಗ್ಲೂಕೋಸ್, ಪ್ಯಾರಾಸಿಟಮಾಲ್ ಮಾತ್ರೆಗಳು,ಅತಿ ಹೆಚ್ಚು ಬೇಕಾಗಿರುವ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಮಾತ್ರೆಗಳು,ನೋವಿನ ಮಾತ್ರೆಗಳು ಲಭ್ಯ ಇರುವುದಿಲ್ಲ ಎಂದು ದೂರಿದ್ದಾರೆ.

ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಧನಶೇಖರ್ ಗಮನ ಸೆಳೆದಾಗ ನಾವು ಇಂಡೆಂಟ್ ಹಾಕಿ ,ಅದಕ್ಕೆ ಟೆಂಡರ್ ಕೆರೆದು ಟೆಂಡರ್ ದಾರರು ನಮ್ಮ ಆಸ್ಪತ್ರೆಗೆ ಔಷಧಿ ಮಾತ್ರೆ ಸರಬರಾಜು ಮಾಡುವ ಹೊತ್ತಿಗೆ 3 ತಿಂಗಳಾಗುತ್ತದೆ.ನಮಗೆ ಜಿಇಎಂ(ಗೌರ್ನಮೆಂಟ್ ಈ ಪ್ರಕ್ಯೂರ್ ಮೆಂಟ್) ನಲ್ಲಿ ಔಷಧಿ ಖರೀಧಿಸಲು ಅವಕಾಶ ಇದೆ. ಆದರೆ ಇದರಲ್ಲಿ ಖರೀಧಿಸಲು ಸರಕಾರದ ಉಗ್ರಾಣದಲ್ಲಿ ನಾವು ಇಂಡೆಂಟ್ ಹಾಕಿರುವ ಔಷಧಿ ಇಲ್ಲ ಎನ್ನುವುದನ್ನು ತೋರಿಸಬೇಕು. ಆದರೆ ಅವರು ಆರೀತಿ ತೋರಿಸುವುದಿಲ್ಲ. ಅಲ್ಲಿ ತೋರಿಸದೆ ನಾವು ಜಿಇಎಂನಲ್ಲಿ ನಾವು ಔಷಧಿ ಖರೀಧಿಸುವ ಹಾಗಿಲ್ಲ. ಜಿಇಎಂ ನಲ್ಲಿ ನಾವು ಇಂಡೆಂಟ್ ಹಾಕಿದರೆ ಅದು ಅಖಿಲಭಾರತ ಮಟ್ಟದಲ್ಲಿ ಔಷಧಿ ಸರಬರಾಜು ಮಾಡುವವರಿಗೆ ಹೋಗುತ್ತದೆ.

ಅಲ್ಲಿ ಯಾವ ಟೆಂಡರ್ ದಾರರು ಔಷಧಿ ಸರಬರಾಜು ಮಾಡುತ್ತಾರೆ ಎಂದು ಗೊತ್ತಿರುವುದಿಲ್ಲ, ನಮಗೆ ಔಷಧಿ ಹಾಗೂ ಬಿಲ್ ಬಂದಾಗಲೇ ನಮಗೆ ಔಷಧಿ ಯಾರು ಸರಬರಾಜು ಮಾಡುತ್ತಿದ್ದಾರೆಂದು ಗೊತ್ತಾಗುತ್ತದೆ ಎನ್ನುತ್ತಾರೆ.

ಒಟ್ಟಾರೆ ಆಡಳಿತ ವೈದ್ಯಾಧಿಕಾರಿಗಳ ಪ್ರಕಾರ ಇಲ್ಲಿನ ಆಸ್ಪತ್ರೆಗೆ ಸರಕಾರದಿಂದ ಯಾವುದೇ ಔಷಧಿಗಳು ಸರಬರಾಜಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಸರಕಾರ ಈ ಕೂಡಲೆ ಸರ್ಕಾರೀ ಆಸ್ಪತ್ರೆಗೆ ಅಗತ್ಯ ಔಷಧಿ, ಮಾತ್ರೆ, ಇಂಜೆಕ್ಸನ್, ಗ್ಲುಕೋಸ್ ಹಾಗೂ ಇತರ ಔಷಧಿಗಳನ್ನು, ಪ್ರಯೋಗಾಲಯಕ್ಕೆ ಅಗತ್ಯ ಇರುವ ಔಷಧಿಗಳನ್ನೂ ಕೂಡಲೆ ಸರಬರಾಜು ಮಾಡಬೇಕು ಎಂದು ಆಗ್ರಹಿಸಿರುವ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಸುರೇಶ ಕುಮಾರ್ ಇನ್ನೊಂದು ವಾರದಲ್ಲಿ ಅಗತ್ಯ ಇರುವ ಔಷಧಿಗಳನ್ನು ಸರಬರಾಜು ಮಾಡದಿದ್ದರೆ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

——-ಸುಕುಮಾರ್

Leave a Reply

Your email address will not be published. Required fields are marked *

× How can I help you?