ಚಿಕ್ಕಮಗಳೂರು-ದೇಶದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಹಾಗೂ ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸಿಪಿಐ ಜಿಲ್ಲಾ ಮಂಡಳಿ ಮುಖಂಡರುಗಳು ಜಿಲ್ಲಾಡಳಿತ ಮುಖಾಂತರ ಮಂಗಳವಾರ ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದರು.
ಈ ಸಂಬoಧ ಶಿರಸ್ತೇದಾರ್ ಹೇಮಂತ್‌ಕುಮಾರ್‌ಗೆ ಮನವಿ ಸಲ್ಲಿಸಿ ಮಣಿಪುರದಲ್ಲಿ ಶಾಂತಿಗೆ ಆಗ್ರಹಿಸಿ, ಕೋಮು ಭಾವನೆ ಕೆರಳಿಸಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದನ್ನು ತಡೆಗಟ್ಟಬೇಕು. ಬೆಲೆ ಏರಿಕೆಯಿoದ ತತ್ತರಿಸಿರುವ ದೇಶದ ಜನತೆಗೆ ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧಾಸುಂದ್ರೇಶ್,ಸರಳ ಬಹುಮತಗಳನ್ನು ಪಡೆಯಲಾಗದ ಬಿಜೆಪಿ ಇತರೆ ಪ್ರಾದೇಶಿಕ ಪಕ್ಷಗಳ ಬೆಂಬಲದೊoದಿಗೆ ಮೂರನೇ ಬಾರಿಗೆ ಅಧಿಕಾರದಲ್ಲಿ ಮುಂದುವರೆದು ಪ್ರಜಾತಂತ್ರ ವಿರೋಧಿ ಆಡಳಿತವನ್ನು ನಡೆಸುತ್ತಿದೆ ಎಂದು ದೂರಿದರು.
ದೇಶದ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪರಿಣಾಮ ಜಿಡಿಪಿ ನಿರಂತರವಾಗಿ ಕುಸಿಯುತ್ತಿದೆ.ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿಯೇ ಬದುಕು ನಡೆಸುವಂತಾಗಿದೆ ಎಂದು ಹೇಳಿದರು.
ಕೇಂದ್ರದ ಮೋದಿ ಸರ್ಕಾರ ದೇಶದ ವ್ಯವಸ್ಥೆಗೆ ಮಾರಕವಾಗಲಿರುವ ಒಂದು ದೇಶ, ಒಂದು ಚುನಾವಣೆ ಎಂಬ ವಿಷಯವನ್ನು ಪದೇ ಪದೇ ತರುತ್ತಿದೆ.ಮಣಿಪುರ,ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಾತಿ ಜನಾಂಗೀಯ ಸಂಘರ್ಷ, ಕೋಮುಭಾವನೆ ಕೆರಳಿಸಿ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲವಾಗುತ್ತಿದೆ ಎಂದು ತಿಳಿಸಿದರು.
ಅದಾನಿ ಸಂಸ್ಥೆ ಪರವಾಗಿ ವ್ಯಾಪಾರ ವಹಿವಾಟು ಒಪ್ಪಂದ ಮಾಡಿಕೊಳ್ಳಲು ಸರ್ಕಾರಿ ಅಧಿಕಾರಿಗಳಿಗೆ ಸಾವಿರಾರು ಕೋಟಿ ರೂ. ಲಂಚ ನೀಡಲಾಗಿದ್ದು ದೋಷಾರೋಪಣೆಗಳ ಸತ್ಯಾಸತ್ಯತೆಯನ್ನು ಅರಿಯಲು ಹಾಗೂ ಇದರಲ್ಲಿ ಕೇಂದ್ರ ಸರ್ಕಾರ ಪಾತ್ರ ಸೇರಿದಂತೆ ಸಮಗ್ರ ತನಿಖೆ ನಡೆಸಲು ಸಂಸತ್ತಿನ ಜಂಟಿ ಸಂಸದೀಯ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ನಿಟ್ಟಿನಲ್ಲಿ ಹೇರಲಾಗಿರುವ ಶಶಾಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂಪಡೆದು ಶಾಂತಿ,ಸೌಹಾರ್ದತೆ ಸ್ಥಾಪನೆಗೆ ಮುಂದಾಗಬೇಕು.ಉತ್ತರ ಪ್ರದೇಶದಲ್ಲಿ ಕೋಮು ಭಾವನೆ ಕೆರಳಿಸುವ ಕೃತ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಜರುಗಿಸಬೇಕು ಹಾಗೂ ಬೆಲೆ ಏರಿಕೆ ತಡೆಗಟ್ಟಿ ನಿರುದ್ಯೋಗ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ನಗರ ಸಮಿತಿ ಸದಸ್ಯ ಸೋಮೇಗೌಡ, ಸಹ ಕಾರ್ಯದರ್ಶಿ ಸಬೀನಾ ಭಾನು ಹಾಜರಿದ್ದರು.
——–-ಸುರೇಶ್