ಮೂಡಿಗೆರೆ:ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು 3ನೇ ಬಾರಿ ಶಾಸಕಿಯಾಗಿದ್ದೆ. ಆಗ ಎಸ್.ಎಂ.ಕೃಷ್ಣ ಅವರು ನನಗೆ ಸಂಪುಟದರ್ಜೆ ಸಚಿವ ಸ್ಥಾನ ನೀಡಿದ್ದರು.ಎಐಸಿಸಿ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಲು ಹೈ ಕಮಾಂಡ್ ಗೆ ಶಿಫಾರಸ್ಸು ಮಾಡಿದ್ದರು. ಅವರಂತಹ ಮತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡು ರಾಜ್ಯದ ರಾಜಕಾರಣ ಕ್ಷೇತ್ರ ತಬ್ಬಲಿಯಾಗಿದೆ ಎoದು ಮಾಜಿ ಸಚಿವೆ ಮೋಟಮ್ಮ ಕಂಬನಿ ಮಿಡಿದಿದ್ದಾರೆ.
ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾಗಿದ್ದಾಗ ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪು ರಚಿಸಿ ಆ ಗುಂಪುಗಳಿಗೆ ಆರ್ಥಿಕ ಸಹಾಯ ನೀಡಲು ಎಸ್.ಎಂ.ಕೃಷ್ಣ ಅವರು 200ಕೋಟಿ ರೂ ಅನುದಾನ ನೀಡಿದ್ದರು.ಕುಂದೂರು, ತತ್ಕೊಳ ಅರಣ್ಯ ಪ್ರದೇಶದಿಂದ ಅಲ್ಲಿನ ನಿವಾಸಿಗಳನ್ನು ಒಕ್ಕೆಲೆಬ್ಬಿಸಿದಾಗ ಎಲ್ಲಾ ಕುಟುಂಬಗಳಿಗೆ 2 ಎಕರೆ ಜಮೀನು ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 60 ಸಾವಿರ ರೂ ಸಹಾಯ ನೀಡಿದ್ದರು.
ಮೂಡಿಗೆರೆ ಕ್ಷೇತ್ರದಲ್ಲಿ ಸೇತುವೆ, ರಸ್ತೆ ಅಭಿವೃದ್ದಿ, ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಿದ್ದರು.100 ಹಾಸಿಗೆಗೆಳ ತಾಲೂಕು ಆಸ್ಪತ್ರೆ, ಹೊಯ್ಸಳ ಕ್ರೀಡಾಂಗಣ ನಿರ್ಮಾಣ, ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಕಟ್ಟಡ ನಿರ್ಮಿಸಲು ಅನುದಾನ ನೀಡಿದ್ದರು. ಚಿಕ್ಕಮಗಳೂರು ನಗರದ ಬಸ್‌ನಿಲ್ದಾಣ, ನಗರಕ್ಕೆ ಹೊನ್ನಮ್ಮನಹಳ್ಳದಿಂದ ಕುಡಿಯುವ ನೀರಿನ ಬೃಹತ್ ಯೋಜನೆಗೆ ಅನುದಾನ, ಹೆಣ್ಣುಮಕ್ಕಳು ಶಿಕ್ಷಣದಿಂದ ಹೊರಗುಳಿಯಬಾರದೆoದು ಉಚಿತ ಶಿಕ್ಷಣ ನೀತಿ ಜಾರಿಗೊಳಿಸಿದ್ದರು. ರೈತರ ಸಾಲ ಮನ್ನಾ, ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್,ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಯೋಜನೆ, ರೈತರ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಜಾರಿಗೊಳಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
1999ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಚಿಕ್ಕಮಗಳೂರಿನ ಅಂದಿನ ಶಾಸಕ ಸಿ.ಆರ್.ಸಗೀರ್ ಅಹಮ್ಮದ್, ಡಿ.ಬಿ.ಚಂದ್ರೇಗೌಡ ಮತ್ತು ನಾನು ಸೇರಿ ಮೂವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿದ್ದರು. ಯಾವ ಸರ್ಕಾರದಲ್ಲಿ ಕೂಡ ಚಿಕ್ಕಮಗಳೂರು ಜಿಲ್ಲೆಗೆ 3ಸಚಿವ ಸ್ಥಾನ ನೀಡಿಲ್ಲ. 2004ರಲ್ಲಿ ನಮ್ಮ ಸರ್ಕಾರದ ಅವಧಿ ಮುಗಿದ ಬಳಿಕ ಚಿಕ್ಕಮಗಳೂರು ಜಿಲ್ಲೆಯವರು 3 ಅಥವಾ 6 ತಿಂಗಳು ಮಾತ್ರ ಸಚಿವರಾಗಿದ್ದಾರೆ. ಉಳಿದಂತೆ ಹೊರಗಿನವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗುತ್ತದೆ. ಈ ರೀತಿಯ ಧೋರಣೆ ಸ್ವತಹ: ಎಸ್.ಎಂ.ಕೃಷ್ಣ ಅವರಿಗೂ ನೋವು ತಂದಿತ್ತು.
ಅಲ್ಲದೆ ಬೆಂಗಳೂರು ನಗರವನ್ನು ಸಿಂಗಪುರದoತೆ ಹೈಟೆಕ್ ನಗರವನ್ನಾಗಿಸುವ ಯೋಜನೆ ರೂಪಿಸಿದ್ದರು. 5 ವರ್ಷದ ಅವಧಿಯಲ್ಲಿ ಯೋಜನೆ ಅನುಷ್ಟಾನ ತರಲು ಅವರಿಗೆ ಸಾಧ್ಯವಾಗಲಿಲ್ಲ .2004ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿದ್ದರೆ ಅವರ ಕನಸು ಈಡೇರಿರುತ್ತಿತ್ತು. ಐಟಿಬಿಟಿ, ಮೆಟ್ರೋರೈಲ್ವೆ ಯೋಜನೆ ಜಾರಿಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಕಾಸ ಸೌಧ ನಿರ್ಮಿಸಿದ್ದಾರೆ. ಅಲ್ಲದೆ ನೀರಾವರಿ ಯೋಜನೆ, ರಸಗೊಬ್ಬರ ಮತ್ತು ಯಾಂತ್ರೀಕರಣಕ್ಕೆ ಸಹಾಯಧನ ಹೀಗೆ ಅನೇಕ ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವರ ನಿಧನದಿಂದ ರಾಜಕಾರಣದ ಅತ್ಯುತ್ತಮ ಕೊಂಡಿಯೊoದು ಕಳಚಿದoತಾಗಿದೆ. ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಹಾರೈಸಿದ್ದಾರೆ.
………. ವರದಿ: ವಿಜಯಕುಮಾರ್.ಟಿ.ಮೂಡಿಗೆರೆ