ತುಮಕೂರು:ತಾಲೂಕು ಕಚೇರಿಯನ್ನು ಲಂಚ ಮತ್ತು ಭ್ರಷ್ಟಾಚಾರಮುಕ್ತ ಮಾಡುವಂತೆ ಕೆ.ಆರ್.ಎಸ್.ಪಕ್ಷ ಒತ್ತಾಯ

ತುಮಕೂರು:ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ಅಧಿಕಾರಿಗಳು ಭ್ರಷ್ಟಾಚಾರದ ಹಾದಿ ಹಿಡಿದಿದ್ದು, ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಆರೋಪಿಸಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಂತರ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಅಂಗವಾಗಿ ತಹಸೀಲ್ದಾರ್‌ಗೆ ತಾಲ್ಲೂಕು ಕಛೇರಿಯನ್ನು ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಮಾಡುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವಂತೆ ಆಗ್ರಹ ಪತ್ರ ಸಲ್ಲಿಸಿ ಮಾತನಾಡಿದ ಅವರು,ತಾಲ್ಲೋಕು ಕೇಂದ್ರಕ್ಕೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿಲ್ಲ. ದಿನನಿತ್ಯ ಕಚೇರಿಗೆ ಅಲೆದರೂ ಬಡವರ ಕೆಲಸಗಳು ಆಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು ಜನಸಾಮಾನ್ಯರಿಂದ ಹಣ ಪಡೆದು ಕೆಲಸ ಮಾಡಿ ಕೊಡುತ್ತಿದ್ದಾರೆ. ನೇರವಾಗಿ ಕಚೇರಿಗೆ ಭೇಟಿ ನೀಡಿ ಕೆಲಸ ಮಾಡಿಕೊಡಲು ಮನವಿ ಸಲ್ಲಿಸಿದರೆ ಯಾವುದೇ ಕೆಲಸಗಳು ಆಗುವುದಿಲ್ಲ. ಆದರೆ, ಮಧ್ಯವರ್ತಿಗಳು ಕೈ ಹಾಕಿದ ಕೆಲಸಗಳು ಕಚೇರಿಗಳಲ್ಲಿ ಕೆಲವೇ ನಿಮಿಷಗಳಲ್ಲಿ ಮಾಡಿಕೊಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಗುತ್ತಿದೆ, ಈ ಬಗ್ಗೆ ಕೆಆರ್‌ಎಸ್ ಪಕ್ಷ ಹಲವು ವರ್ಷಗಳಿಂದ ನಿರoತ ರವಾಗಿ ಪ್ರತಿಭಟನೆ, ಹಿರಿಯ ಅಧಿಕಾರಿಗಳಿಗೆ ಪತ್ರಗಳನ್ನು ನೀಡಿ,ಏಕಾಏಕಿ ಕಚೇರಿಗೆ ನುಗ್ಗಿ ತಪ್ಪಿತಸ್ಥರನ್ನು ಹಿಡಿದರೂ ಅಂಥವರಿಗೆ ಸೂಕ್ತ ಶಿಕ್ಷೆಯಾಗುತ್ತಿಲ್ಲ. ಸರ್ಕಾರದಿಂದ ಯೋಜನೆಯಡಿ ಪಲಾನುಭವಿಯಾಗಬೇಕಾದರೂ ಅಧಿಕಾರಿಗಳಿಗೆ ಇಂತಿಷ್ಟು ಲಂಚ ಕೊಟ್ಟೇ ಪಲಾನುಭವಿಯಾಗಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ದೂರಿದರು.

ಕಚೇರಿಯಲ್ಲಿ ಯಾವುದಾದರು ದಾಖಲೆ ಕುರಿತು ಮಾಹಿತಿ ಮತ್ತು ಸೌಲಭ್ಯ ಪಡೆಯಲು ಹೋದರೆ ತಹಸೀಲ್ದಾರ್ ಆದೇಶ ಮಾಡಿದ್ದರೂ ಸಹ ಕೆಳ ಹಂತದ ನೌಕರರು ಮಾಹಿತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲವು ಬಾರಿ ರೆಕಾರ್ಡ್ ರೂಮ್‌ನಲ್ಲಿ ದಾಖಲೆ ಸರಿ ಇದ್ದರೂ ಸಹ ಅದನ್ನು ಅಧಿಕಾರಿಗಳ ಮಟ್ಟಕ್ಕೆ ಕೊಟ್ಟಿರುವುದಿಲ್ಲ. ದಾಖಲೆ ಮತ್ತಿತರೇ ಅರ್ಜಿ ಇಲ್ಲೇ ಇಟ್ಟುಕೊಂಡು ಪಲಾನುಭವಿಗಳಿಗೆ ಅಧಿಕಾರಿಗಳು ಸಹಿ ಹಾಕಬೇಕು, ಓಕೆ ಮಾಡಬೇಕು ಎಂದೆಲ್ಲ ಹೇಳಿ ಜನರಿಗೆ ಸ್ವಲ್ಪ ದಿನ ಯಾಮಾರಿಸಿ ನಂತರ ಅದಕ್ಕೆ ಸಬೂಬು ಕಟ್ಟಿ ತಿರಸ್ಕಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಜ್ಞಾನಸಿoಧುಸ್ವಾಮಿ ತಿಳಿಸಿದರು.

ಕೆಆರ್‌ಎಸ್ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳಾದ ರಘುನಂದನ್, ಚನ್ನಯ್ಯ,ಬೈರೇಶ್ ಮುಂತಾ ದವರಿದ್ದರು.

————–ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?