ಕೆ.ಆರ್.ಪೇಟೆ-ತಾಲೂಕಿನ ಬೂಕನಕೆರೆ ಹೋಬಳಿಯ ವರಹನಾಥ ಕಲ್ಲಹಳ್ಳಿಯ ಪವಿತ್ರ ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ನದಿಗಳ ಹಿನ್ನೀರಿನಲ್ಲಿ ನೆಲೆಸಿರುವ ಶ್ರೀಲಕ್ಷ್ಮೀ ಸಮೇತ ಭೂವರಹನಾಥ ಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ವಿಶೇಷ ಪುಷ್ಪಾಭಿಷೇಕ, ಅಷ್ಟಗಂಧ ದ್ರವ್ಯಾಭಿಷೇಕ, ಕ್ಷೀರಾಭಿಷೇಕ, ಅಡ್ಡ ಪಲ್ಲಕ್ಕಿ ಉತ್ಸವ, ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಗಳು ಸಡಗರ ಸಂಭ್ರಮದಿoದ ನಡೆದವು.
ಭೂ ವರಹನಾಥ ಸ್ವಾಮಿಗೆ ಪವಿತ್ರ ಗಂಗಾಜಲ, ಒಂದು ಸಾವಿರ ಲೀಟರ್ ಹಾಲು, ಎಳನೀರು, ಕಬ್ಬಿನ ಹಾಲು, ಜೇನುತುಪ್ಪ, ಹಸುವಿನ ತುಪ್ಪ, ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಪವಿತ್ರ ಪತ್ರೆಗಳು, ಧವನ, ತುಳಸಿ, ಕಮಲ, ಪಾರಿಜಾತ ಹೂವುಗಳು ಸೇರಿದಂತೆ 58ವಿವಿಧ ಬಗೆಯ ಅಪರೂಪದ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಿ ಕಲ್ಯಾಣೋತ್ಸವ ನಡೆಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಾಲಯ ವ್ಯವಸ್ಥಾಪನಾ ಸಮಿತಿಯ ಸಂಚಾಲಕರಾದ ಡಾ.ಶ್ರೀನಿವಾಸರಾಘವನ್ ನೆರೆದಿದ್ದ ಭಕ್ತರನ್ನು ಉದ್ಧೇಶಿಸಿ ಮಾತನಾಡಿ, ಬೇಡಿ ಬಂದ ಭಕ್ತರ ಬೇಡಿಕೆಗಳನ್ನು ಈಡೇರಿಸಿ ಹರಸುತ್ತಿರುವ ಭೂವರಹನಾಥ ಸ್ವಾಮಿಯು ಸ್ವಂತ ಮನೆಯನ್ನು ಹೊಂದಬೇಕು, ಭೂಮಿಯ ವ್ಯಾಜ್ಯಗಳು ಬಗೆಹರಿಯಬೇಕು ಎಂದು ಹರಕೆ ಹೊತ್ತು ಪ್ರಾರ್ಥನೆ ಸಲ್ಲಿಸಿದವರಿಗೆ ಸ್ವಂತ ಸೂರನ್ನು ಕರುಣಿಸುತ್ತಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಪರಕಾಲ ಸ್ವಾಮೀಜಿಗಳು ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದು ತಿರುಮಲ ತಿರುಪತಿಯ ಮಾದರಿಯಲ್ಲಿ ದೇವಾಲಯವನ್ನು ಸುಮಾರು 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗ್ರಾನೈಟ್ ಕಲ್ಲಿನಿಂದಲೇ ನಿರ್ಮಿಸುತ್ತಿದ್ದಾರೆ.
ಮೂರು ಪ್ರಾಕಾರಗಳ ದೇವಾಲಯವು ಹೊಯ್ಸಳ ವಾಸ್ತು ವೈಭವದ ಮಾದರಿಯಲ್ಲಿ ನಿರ್ಮಾಣ ವಾಗುತ್ತಿದ್ದು 176ಅಡಿ ಎತ್ತರದ ಬೃಹತ್ ರಾಜಗೋಪುರದ ನಿರ್ಮಾಣವು ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣವಾಗಲಿದೆ ಎಂದು ಶ್ರೀನಿವಾಸ ರಾಘವನ್ ಹೇಳಿದರು.
ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡಿರುವ ದಾನಿಗಳೂ ಆದ ದುಬೈನ ಉದ್ಯಮಿ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುದುಗೆರೆ ಪರಮೇಶ್, ಪಿಡಿಓ ಗೀತಾ, ಕಾರ್ಯದರ್ಶಿ ದೇವರಾಜ್, ಗ್ರಾ.ಪಂ.ಮಾಜಿ ಸದಸ್ಯ ಮುದುಗೆರೆ ಯೋಗಣ್ಣ, ಗಂಜಿಗೆರೆ ನೇತಾಜಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ನಿರಂಜನ್, ಯುವ ವಕೀಲ ಜಿ.ಜೆ.ಲೋಕೇಶ್, ಅಪ್ಪನಹಳ್ಳಿ ಅರುಣ್ ಸೇರಿದಂತೆ ಸಾವಿರಾರು ಭಕ್ತಾದಿಗಳು ರೇವತಿ ನಕ್ಷತ್ರದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
—————-–ಶ್ರೀನಿವಾಸ್ ಕೆ ಆರ್ ಪೇಟೆ