ಕೊಟ್ಟಿಗೆಹಾರ:ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ನಿಮಿತ್ತ ತಾಲ್ಲೂಕಿನ ಸೂಕ್ಷ್ಮ ಗಡಿ ಭಾಗಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ಕ್ರಮವಾಗಿ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬಣಕಲ್ ಪಿ.ಎಸ್.ಐ ಡಿ.ವಿ.ರೇಣುಕ ತಿಳಿಸಿದರು.
ಅವರು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಗೆ ಬೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿ,ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಕೊಟ್ಟಿಗೆಹಾರ, ಬಾಳೂರು ಚೆಕ್ ಪೋಸ್ಟ್, ಜನ್ನಾಪುರ,ಕೊಲ್ಲಿಬೈಲ್,ಕಸ್ಕೇಬೈಲ್ ಮುಂತಾದ ಕಡೆ ತಪಾಸಣೆಗೆ ಪೊಲೀಸ್ ನಾಕಾ ಬಂದಿ ಹಾಕಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಹಗಲು ಹಾಗೂ ರಾತ್ರಿ ಪಾಳಿಯ ಕರ್ತವ್ಯದಲ್ಲಿ ಓರ್ವ ಸಬ್ ಇನ್ಸ್ಪೆಕ್ಟರ್, ಎ.ಎಸೈ,ದಫೇದಾರ್, ಪೊಲೀಸ್ ಸಿಬ್ಬಂದಿ ಸೇರಿ ಐವರು ಕರ್ತವ್ಯ ನಿರ್ವಹಿಸುತ್ತಾರೆ.ಡಿ.ಆರ್.ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ.
ಕರಾವಳಿ ಭಾಗದಿಂದ ಬಂದ ವಾಹನಗಳ ಮಾಹಿತಿ ಕಲೆ ಹಾಕಲಾಗುತ್ತದೆ.ಡಿಸೆಂಬರ್ 13ರಂದು ಶುಕ್ರವಾರ ರಾತ್ರಿ 10 ಗಂಟೆಯಿಂದ ಭಾನುವಾರ ಬೆಳಿಗ್ಗೆ 6ಗಂಟೆವರೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ಜಿಲ್ಲೆಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗುತ್ತದೆ.ತುರ್ತು ಸೇವೆಯಾದ ಪತ್ರಿಕೆಗಳು,ಹಾಲು,ಮೆಡಿಕಲ್,ಆಸ್ಪತ್ರೆಗಳು ಹೊರತು ಪಡಿಸಿ ಬೇರೆ ಎಲ್ಲಾ ಅಂಗಡಿ,ಹೊಟೇಲ್,ಕ್ಯಾಂಟೀನ್ ಗಳನ್ನು ಮುಚ್ಚಲು ಆದೇಶಿಸಲಾಗಿದೆ.ಹಾಗೆಯೇ ಬಾರ್ ಆಂಡ್ ರೆಸ್ಟೋರೆಂಟ್ ಗಳನ್ನು ಗುರುವಾರದಂದೇ ಸೀಲ್ ಮಾಡಿ ಬಂದ್ ಮಾಡಲಾಗಿದೆ ಎಂದರು.
ಕೊಟ್ಟಿಗೆಹಾರ ಪ್ರವಾಸಿ ತಾಣವಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.ಧಾರ್ಮಿಕ ಸ್ಥಳಗಳಿಗೂ ಪೊಲೀಸರನ್ನು ನಿಯೋಜಿಸಲಾಗಿದೆ.ಯಾವುದೇ ಕಾರಣಕ್ಕೂ ಅಂಗಡಿ, ಹೋಟೇಲು ವರ್ತಕರು ಅಂಗಡಿಗಳನ್ನು ಮುಚ್ಚದೇ ಕಾನೂನಿಗೆ ಅಡ್ಡಿ ಪಡಿಸಿದರೆ ಅಂತವರ ವಿರುದ್ದ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಪಿ.ಎಸ್.ಐ ಡಿ.ವಿ.ರೇಣುಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಶ್ರೀಧರ್, ಭಾರತಿ,ಅಭಿಷೇಕ್,ಮಹೇಶ್,ಚಾಲಕ ಸತೀಶ್ ಸೇರಿದಂತೆ ಡಿ.ಆರ್ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
—–—-ಆಶ ಸಂತೋಷ್