ಚಿಕ್ಕಮಗಳೂರು-ನಗರದ ಆದಿಭೂತಪ್ಪ ದೇವಾಲಯದ ರಸ್ತೆಯಲ್ಲಿ ವಂದೇ ಮಾತರಂ ಟ್ರಸ್ಟ್ ಏರ್ಪಡಿಸಿದ್ಧ ಗೀತಾ ಜಯಂತಿ ಅಂಗವಾಗಿ ಭಗವದ್ಗೀತೆ ಗ್ರಂಥವನ್ನು ಅಡ್ಡಪಲ್ಲಕ್ಕಿಯಲ್ಲಿ ಮಕ್ಕಳು ಹೊತ್ತು ಪ್ರತಿ ಮನೆಗಳಿಗೆ ತೆರಳಿ ಶ್ರೇಷ್ಟಗ್ರಂಥವನ್ನು ನೀಡುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಜಯಂತಿ ಹಿನ್ನೆಲೆ ಮಕ್ಕಳು ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ವೇಷಭೂಷಣ ತೊಟ್ಟಿದ್ದರು.ಓರ್ವ ಬಾಲಕ ಶ್ರೀಕೃಷ್ಣ ಪಾತ್ರದಲ್ಲಿ ದಾರಿಯುದ್ದಕ್ಕೂ ಸಾಗಿದನು.ಕೇಸರಿ ಶಲ್ಯವನ್ನು ತೊಟ್ಟ ಮಕ್ಕಳು ಭಗವದ್ಗೀತಾ ಗ್ರಂಥ ಹೊತ್ತು ಮೆರವಣಿಗೆಯುದ್ಧಕ್ಕೂ ಪ್ರಜ್ವಲಿಸುವ ದೀಪವನ್ನಿಡಿದು ಮುನ್ನೆಡೆದರು.
ಮೆರವಣಿಗೆ ಮನೆಗಳ ಸಮೀಪ ಆಗಮಿಸುತ್ತಿದ್ಧಂತೆ ನಿವಾಸಿಗಳು ಆರತಿ ಬೆಳಗಿ ಸಂಭ್ರಮಿಸಿದರು. ಅಲ್ಲದೇ ಪ್ರತಿ ಮನೆಗಳಿಗೆ ಟ್ರಸ್ಟ್ ಕಡೆಯಿಂದ ಉಚಿತವಾಗಿ ಧರ್ಮಪ್ರತಿಪಾದಿಸುವ ಭಗವದ್ಗೀತಾ ಗ್ರಂಥವನ್ನು ಮಕ್ಕಳ ಮುಖಾಂತರ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಮಾತನಾಡಿ, ಜಗತ್ತಿನ ಹಲವಾರು ಸಮಸ್ಯೆ, ನೋವು ಅಥವಾ ಸಂಕಷ್ಟಗಳಿಗೆ ಶ್ರೇಷ್ಟ ಗ್ರಂಥ ಭಗವದ್ಗೀತೆಯಲ್ಲಿ ಪರಿಹಾರವಿದೆ. ಪ್ರತಿನಿತ್ಯ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಸಮಸ್ಯೆಗಳಿಂದ ಪಾರಾಗಿ ನೆಮ್ಮದಿ ಬದುಕು ಸಾಗಿಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಮಕ್ಕಳು ಪುರಾತನ ಗ್ರಂಥವನ್ನು ಓದುವ ಹವ್ಯಾಸ ಕಳೆದುಕೊಳ್ಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಪಾಲಕರು ಬಾಲ್ಯದಿಂದಲೇ ಮಕ್ಕಳು ಧರ್ಮದ ಅರಿವು ಮೂಡಿಸುವ ಸಲುವಾಗಿ ಭಗವದ್ಗೀತಾ ಗ್ರಂಥವನ್ನು ಅಭ್ಯಾಸಿದರೆ ಭವಿಷ್ಯದಲ್ಲಿ ಎಂತಹ ಸಂಕಷ್ಟ ಉದ್ಬವಿಸಿದರೂ ಎದುರಿ ಸಬಲ್ಲ ಆತ್ಮ ಸ್ಥೈರ್ಯ ಸಿಗಲಿದೆ ಎಂದು ತಿಳಿಸಿದರು.