ಕೊಟ್ಟಿಗೆಹಾರ-ಇಲ್ಲಿನ ತರುವೆಯ ಏಕಲವ್ಯ ವಸತಿ ಮಾದರಿ ಶಾಲೆಯ ವಸತಿಗೃಹದ ಒಂದನೇ ನೆಲಮಹಡಿಯಲ್ಲಿ ಶಾಲಾ ಸಿಬ್ಬಂದಿಯ ಕೋಣೆಯ ಮುಂದೆ ನಾಗರಹಾವು ಸೆರೆಯಾಗಿದೆ.
ಭಾನುವಾರ ದಿನ ಆದುದರಿಂದ ಶಿಕ್ಷಕರು ವಸತಿಗೃಹದಲ್ಲೇ ಇದ್ದು ಹೊರಗೆ ಬಂದಿರಲಿಲ್ಲ.ಸಿಬ್ಬಂದಿಯೊಬ್ಬರು ವಸತಿಗೃಹದ ಮೆಟ್ಟಿಲು ಏರಿ ಸಾಗುವಾಗ ಹಾವು ಬುಸುಗುಟ್ಟಿದೆ.ಕೂಡಲೇ ಅವರು ಕೋಣೆಯಲ್ಲಿರುವ ಸಿಬ್ಬಂದಿಗೆ ಹೊರಬರದಂತೆ ಹೇಳಿದ್ದಾರೆ.ಪ್ರಾಂಶುಪಾಲ ಸತೀಶ್ ಜೈಶ್ವಾಲ್ ಸ್ನೇಕ್ ಆರೀಫ್ ಅವರಿಗೆ ಹಾವು ಇರುವಿಕೆಯ ಬಗ್ಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಬೃಹತ್ ಆಕಾರದ ನಾಗರಹಾವನ್ನು ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ವಸತಿಗೃಹದ ಸುತ್ತ ಕಸ ತ್ಯಾಜ್ಯ, ಕಾಡು
ಏಕಲವ್ಯ ಶಾಲೆಯು ವಸತಿಗೃಹದ ಶಾಲೆಯಾಗಿದ್ದು ಇಲ್ಲಿ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಹಾಸ್ಟೆಲ್ ಮತ್ತು ಸಿಬ್ಬಂದಿಯ ವಸತಿ ಗೃಹಗಳಿವೆ.ಹಲವು ಜಿಲ್ಲೆಯ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ವಸತಿಗೃಹದ ಸುತ್ತಮುತ್ತ ಕಸದ ತ್ಯಾಜ್ಯ ಹಾಗೂ ಕಾಡಿನಿಂದ ಕೂಡಿದೆ.
ನಿರ್ವಹಣೆಯ ಕೊರತೆಯಿಂದ ಮಕ್ಕಳಿಗೆ ಓಡಾಡಲು ಭದ್ರತೆಯಿಲ್ಲ.ಇದು ಚಾರ್ಮಾಡಿ ಘಾಟ್ ತಪ್ಪಲಿನಲ್ಲಿರುವುದರಿಂದ ಈ ಭಾಗದಲ್ಲಿ ಕಾಳಿಂಗ ಸರ್ಪ ಹಾಗೂ ಇತರೆ ನಾಗರಹಾವುಗಳು ಇವೆ.ಸುತ್ತಲ ವಾತಾವರಣದ ನಿರ್ವಹಣೆ ಕುಂಠಿತವಾ ಗಿರುವುದರಿಂದ ವಿಷ ಜಂತುಗಳ ಸಂಚಾರ ಉಂಟಾಗಿದೆ.ಸಂಬಂಧಿಸಿದ ಅಧಿಕಾರಿಗಳು ವಾತಾವರಣದಲ್ಲಿರುವ ತ್ಯಾಜ್ಯ, ಗಿಡಗಂಟಿಗಳನ್ನು ಕಡಿದು ಸ್ವಚ್ಚತೆ ಮಾಡದಿದ್ದರೆ ವಿದ್ಯಾರ್ಥಿಗಳಿಗೆ ಹಾವುಗಳಿಂದ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ .ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
———–ಆಶ ಸಂತೋಷ್ ಅತ್ತಿಗೆರೆ