ಚಿಕ್ಕಮಗಳೂರು-ಯುದ್ಧಭೂಮಿಯಲ್ಲಿ ಪ್ರಾಣದ ಹಂಗು ತೊರೆದು ರಾಷ್ಟ್ರವನ್ನು ಹಗಲು-ರಾತ್ರಿ ಎನ್ನದೇ ಕಾಯುತ್ತಿರುವ ಸೈನಿಕರ ಸೇವೆ ಎಂದಿಗೂ ಮರೆಯವಂತಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ ವತಿಯಿಂದ ಏರ್ಪಡಿಸಿದ್ದ 1971ರ ಯುದ್ಧದ 54ನೇ ವಿಜಯೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹುತಾತ್ಮಕ ಸೈನಿಕರ ತ್ಯಾಗ, ಶೌರ್ಯ ಹಾಗೂ ಬಲಿದಾನದಿಂದ ನಾವುಗಳು ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ. ಅಂತಹ ಮಹಾನ್ ಯೋಧರನ್ನು ದೇಶದ ಪ್ರತಿ ಪ್ರಜೆಯು ಸ್ಮರಿಸಬೇಕು. ಜೊತೆಗೆ ನಿವೃತ್ತಿಗೊಂಡ ಬಂದoತಹ ಸೈನಿಕರಿಗೆ ಗೌರವ ಸೂಚಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಯಾವುದೇ ಫಲಾಪೇಕ್ಷೆ ಇಲ್ಲದೇ ತನ್ನ ಇಡೀ ಕುಟುಂಬವನ್ನೇ ತೊರೆದು ದೇಶದ ಹಿತ ಕಾಪಾಡುವಲ್ಲಿ ತೆರಳುವ ಸೈನಿಕರು ನಮಗೆಲ್ಲಾ ಸ್ಪೂರ್ತಿಯಾಗಿರಬೇಕು.ವಿದ್ಯಾರ್ಥಿಗಳು ಕೂಡಾ ಮುಂದಿನ ಭವಿಷ್ಯದಲ್ಲಿ ಸೈನಿಕರಾಗಬೇಕೆಂಬ ಕನಸು ಕಂಡು ಮುನ್ನೆಡೆದರೆ ಅದಕ್ಕಿಂತ ದೊಡ್ಡಭಾಗ್ಯ ಬೇರೊಂದಿಲ್ಲ ಎಂದು ಹೇಳಿದರು.
ತಾ.ಪಂ. ಉಪನಿರ್ದೇಶಕ ಜಯಸಿಂಹ ಮಾತನಾಡಿ, ದೇಶದ ಇತಿಹಾಸದಲ್ಲಿ ಭಾರತ,ಪಾಕಿಸ್ತಾನ ಯುದ್ಧವನ್ನು ದೇಶದ ಪ್ರಜೆಗಳು ಎಂದಿಗೂ ಮರೆಯುವಂತಿಲ್ಲ ಎಂದ ಅವರು ಇಷ್ಟೆಲ್ಲಾ ಸಾಧನೆ ಮಾಡಿರುವ ಭಾರತೀಯ ಸೇನಾಪಡೆಗಳು ನಮ್ಮೆಲ್ಲರಿಗೂ ರಾಷ್ಟ್ರದ ದೊಡ್ಡ ಕಿರೀಟವಿದ್ದಂತೆ ಎಂದರು.
ಮಾಜಿ ಸೈನಿಕ ಅಲ್ವಿನ್ ಮಾತನಾಡಿ, ಅಂದಿನ ಕಾಲದ ಸೈನಿಕರಿಗೆ ಯುದ್ಧದಲ್ಲಿ ಸಮಗ್ರ ವಸ್ತ್ರ ,ಶಸ್ತ್ರಾಸ್ತ್ರಗಳ ಕೊರತೆಯ ನಡುವೆ ದೇಶವನ್ನು ಕಾಯುತ್ತಿದ್ದರು. ಆ ಕಾಲದ ಕಾಂಗ್ರೆಸ್ ಪ್ರಧಾನಿಯೊಬ್ಬರು ದೇಶಕ್ಕೆ ಸೈನಿಕರ ಅವಶ್ಯವಿಲ್ಲ. ಶಾಂತಿ ಮಂತ್ರ ಪಠಿಸುತ್ತೇವೆ ಎಂದು ಸೈನಿಕರನ್ನು ಅಲ್ಲಗೆಳೆದಿದ್ದರು ಎಂದು ತಿಳಿಸಿದರು.
ತದನಂತರ ರಾಷ್ಟ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯೋಧರಿಗೆ ವಿಶೇಷ ಕಾಳಜಿಯನ್ನು ವಹಿಸಿ ಮೊದಲ ಆದ್ಯತೆ ಸೈನಿಕರಿಗೆ ನೀಡುವ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಸೈನಿಕರ ಗೌರವಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ, 1971ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ.ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬoಧಿಸಿದ್ದು ಪಾಕಿಸ್ತಾನದ ಆಂತರಿಕ ಯುದ್ಧವಾಗಿತ್ತು ಎಂದು ಹೇಳಿದರು.
ಇದೇ ವೇಳೆ ಆಜಾದ್‌ಪಾರ್ಕ್ ವೃತ್ತದಿಂದ ಹಲವಾರು ಮಾಜಿ ಸೈನಿಕರು ವೀರಮರಣ ಹೊಂದಿದ ಯೋಧರಿಗೆ ವಂದೇ ಮಾತರಂ ಘೋಷಣೆ ಕೂಗುತ್ತಾ ತಾ.ಪಂ. ಆವರಣದವರೆಗೆ ಕಾಲ್ನಡಿಗೆ ಮೆರವಣಿಗೆ ನಡೆಸಿದರು.ಬಳಿಕ ಮೌನಚರಣೆ ನಡೆಸಿ ಯೋಧರಿಗೆ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಗೋಪಾಲಕೃಷ್ಣ, ಮಾಜಿ ಸೈನಿಕರಾದ ರಾಮಯ್ಯ, ವೀರುಪಾಕ್ಷ, ಸುರೇಶ್, ಮಂಜುನಾಥಸ್ವಾಮಿ ಸೇರಿದಂತೆ ಮತ್ತಿತರರಿದ್ದರು.