ಮಂಡ್ಯ-ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವಗುರು ಬಸವಣ್ಣನವರನ್ನು ಕಡೆಗಣಿಸಲಾಗಿದೆ.ಆಹ್ವಾನ ಪತ್ರಿಕೆ,ಪ್ರಚಾರದ ಪೋಸ್ಟರ್, ಬ್ಯಾನರ್‌ಗಳಲ್ಲಿ ರಾಷ್ಟ್ರಕವಿ ಕುವೆಂಪು, ಬಸವಣ್ಣನವರ ಭಾವಚಿತ್ರವನ್ನು ಹಾಕದೆ ಅಪಮಾನಗೊಳಿಸಲಾಗಿದೆ ಎಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮoಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪೂಜ್ಯ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಸಸಿ ನೆಟ್ಟು ಕಾಯಕಯೋಗಿ ಫೌಂಡೇಶನ್ ಹುಣ್ಣಿಮೆಯ ಅಂಗವಾಗಿ ಆಯೋಜಿಸಿದ್ದ `ದಾಸೋಹ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿ ದರು.
ಹಲವಾರು ಬಾರಿ ಜಿಲ್ಲಾಡಳಿತ,ಕಸಾಪ ಪದಾಧಿಕಾರಿಗಳಿಗೆ ಸಭೆಗಳಲ್ಲಿ ಮನವಿ ಸಲ್ಲಿಸಿದ್ದರೂ ವೈದಿಕಶಾಹಿಗಳು ಶರಣರ ವಿಚಾರಗಳನ್ನು ಇಂದಿಗೂ ಕಡೆಗಣಿಸುತ್ತಿರುವುದು ಖಂಡನೀಯ ಎಂದರು.
ಗಂಡು ಮೆಟ್ಟಿದ ಭೂಮಿ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಭಾಷೆಗೆ ದೈವತ್ವದ ಮನ್ನಣೆ ತಂದುಕೊಟ್ಟ ಹನ್ನೆರಡನೇ ಶತಮಾನದ ಶರಣರ ವಚನಗಳು,ಆಶಯಗಳ ವಿಚಾರಗಳು ಮಂಡನೆಯಾಗಲಿ ಎಂದು ಲಿಂಗಾಯತ ಮಹಾಸಭಾ ನಿರ್ದೇಶಕರಾದ ಇಂಜಿನಿಯರ್ ವಿ.ಎಂ.ಮಹೇoದ್ರ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಶರಣರು ವಚನಗಳ ಮೂಲಕ ಅಪಾರ ಕೊಡುಗೆಯನ್ನು ನೀಡಿದ್ದಾರೆ.ಅಂದಿನ ಕಾಲಘಟ್ಟದಲ್ಲಿ ಜೈನ ಸಾಹಿತ್ಯ, ಸಂಸ್ಕೃತ ಉತ್ಕೃಷ್ಟ ಮತ್ತು ದೇವನಾಗರಿ ಭಾಷೆಯಾಗಿದ್ದು,ಬ್ರಾಹ್ಮಣರಿಗೆ ಮಾತ್ರ ಹೆಚ್ಚು ಬಳಸುವ, ರಚಿಸುವ ಅವಕಾಶವಾಗಿತ್ತು. ಇಂತಹ ಕಾಲಘಟ್ಟದಲ್ಲಿ ಕನ್ನಡ ಭಾಷೆಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟ ಪರಿಣಾಮ ಇಂದು ಜಾಗತಿಕ ಮಟ್ಟದಲ್ಲಿ ಕನ್ನಡದ ಕಹಳೆ ಮೊಳಗುತ್ತಿದೆ ಎಂದರು.
ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಬಸವಣ್ಣನವರ ಅನುಭವಮಂಟಪದ ಭಕ್ತಿ ಚಳುವಳಿಯ ಪ್ರಭಾವವನ್ನು ಅರಿತು ಆಪಘಾನಿಸ್ಥಾನ,ಕಾಶ್ಮೀರ,ತಮಿಳುನಾಡು,ಒರಿಸ್ಸಾ,ಆಂದ್ರಪ್ರದೇಶದಿoದ ಬಂದ ಹಲವಾರು ಮಂದಿ ಅನ್ಯಭಾಷಿಕರಿಗೆ ಕನ್ನಡಭಾಷೆಯ ಕಂಪನ್ನು ಕಲಿಸಿ ಅವರಿಂದ ವಚನ ಬರೆಸಿದ ಶರಣರು ಕನ್ನಡವನ್ನು ಮಾತೃಭಾಷೆಯನ್ನಾಗಿಸಿದ ಧೀಮಂತರು. ಇಂತಹ ಶರಣರ ವಿಚಾರಗಳು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಿ ಜನಮಾನಸದಲ್ಲಿ ಉಳಿಯುವಂತಾಗಬೇಕೆoದರು.
12ನೇ ಶತಮಾನದಲ್ಲಿ ಅನೇಕ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ಅಳಿವಿನಂಚಿನಲಿತ್ತು. ಅಂತಹ ಸಂದರ್ಭದಲ್ಲಿ ಶರಣರ ವಚನ ಸಾಹಿತ್ಯ ಅತ್ಯಂತ ಪರಿಣಾಮಕಾರಿ ಮತ್ತು ಕ್ರಾಂತಿಕಾರಿಕ ಮೂಲಕ ವಿಮರ್ಶಕರ ಹಾಗೂ ಅನುಭವಿಗಳ ದಿನನಿತ್ಯ ನಡೆಯುವ ವಾಸ್ತವದ ಬದುಕನ್ನು ಆಧರಿಸಿಕೊಂಡು,ಸತ್ಯಾನ್ವೇಷಣೆಯ ಅನುಸಂಧಾನ ನಡೆದು ವರ್ಗ, ವರ್ಣ, ಲಿಂಗರಹಿತ ಸಮಾನತೆಯ ಸಮಸಮಾಜ ನಿರ್ಮಾಣಕ್ಕೆ ಅನುಭವಮಂಪಟಪ ಭದ್ರ ಅಡಿಪಾಯ ಹಾಕಿತು ಎಂದರು.
ಕಾರ್ಯಕ್ರಮದಲ್ಲಿ ದಾಸೋಹಿಗಳಾದ ಕಿರುಗಾವಲು ಬಾಲಚಂದ್ರು, ವಿ.ಎಂ.ಮಹೇoದ್ರ ಅವರನ್ನು ಸಿದ್ದಗಂಗಾಶ್ರೀ ಸೇವಾಸಮಿತಿ ಅಧ್ಯಕ್ಷ ಎಂ.ಆರ್.ಮoಜುನಾಥ್ ಅಭಿನಂದಿಸಿದರು. ಬಿಜೆಪಿ ಮುಖಂಡ ಜಗದೀಶ್, ಯೋಗಶಿಕ್ಷಕ ಶಿವರುದ್ರಪ್ಪ, ಬೆಳ್ಳಪ್ಪ, ತಬ್ರೇಜ್ ಖಾನ್, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.