ಬೆಳಗಾವಿ-ತುಮಕೂರು ಜಿಲ್ಲೆಯ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಮತ್ತೆ ಆಧುನೀಕರಣ ಗೊಳಿಸಿ ವಿಸ್ತರಣೆ ಮಾಡಿರುವುದರಿಂದ ಜಿಲ್ಲೆಯ ಇತರ ಐದಾರು ತಾಲ್ಲೂಕುಗಳ ರೈತರಿಗೆ ನೀರಿನ ಕೊರತೆಯಾಗಿದ್ದು ಈ ಯೋಜನೆಯನ್ನು ಕೈ ಬಿಡಬೇಕು ಎಂದು ವಿಧಾನಸಭೆಯಲ್ಲಿ ಸೋಮವಾರ ರಾತ್ರಿ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡರು ಭಾರಿ ಕೋಲಾಹಲದ ನಡುವೆ ಆಗ್ರಹಿಸಿದರು.
ಗಮನ ಸೆಳೆಯುವ ಸೂಚನೆ ಮೂಲಕ ವಿಷಯ ಮಂಡಿಸಿದ ಅವರು, 2019 ರಲ್ಲಿ 70 ನೇ ಕಿ.ಮೀ ನಿಂದ 165 ನೇ ಕಿ.ಮೀ ನಡುವೆ ಸಂಪರ್ಕ ಕಲ್ಪಿಸುವ ಒಂದು ಲಿಂಕ್ ಕೆನಾಲ್ ನಿರ್ಮಾಣಕ್ಕೆ 614 ಕೋಟಿ ರೂಪಾಯಿಯಗಳ ಯೋಜನೆಗೆ ಸರ್ಕಾರ ಅನುಮೋದನೆ ಕೊಡುತ್ತದೆ.ಈ ಹಂತದಲ್ಲಿ ಸರ್ಕಾರ ಬದಲಾವಣೆಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು.ಅವರು ಈ ಯೋಜನೆಯನ್ನು ಪರಿಷ್ಕರಿಸಲು ಸೂಚಿಸಿ ಕಾಲುವೆಯ ಅಗಲವನ್ನು ಹೆಚ್ಚಿಸಿದರು. ಅದರಿಂದಲೇ ಮೂರು ಟಿ.ಎಂ.ಸಿಯಷ್ಟು ನೀರು ಕುಣಿಗಲ್ ಭಾಗಕ್ಕೆ ಈಗ ಹರಿಯುತ್ತಿದೆ.ಹಾಗಿರುವಾಗ ಈ ಸರ್ಕಾರ ಬಂದ ಮೇಲೆ ನಬಾರ್ಡ್ನಿಂದ 1,000 ಕೋಟಿ ರೂಪಾಯಿ ಸಾಲ ತೆಗೆದುಕೊಂಡು ಮತ್ತೆ ಅದೇ ಯೋಜನೆಯನ್ನು ಪುನರ್ ವಿನ್ಯಾಸಗೊಳಿಸಲು ಹೊರಟಿದೆ.ಹೀಗೆ ಪುನರ್ ವಿನ್ಯಾಸಗೊಳಿಸಲು ಆ ವಿಚಾರ ಸಂಪುಟದ ಅನುಮೋದನೆ ಪಡೆಯಬೇಕು ಇಲ್ಲಿ ಹಾಗೆ ಆಗಿಲ್ಲ ಎಂದು ಅವರು ಸದನದ ಗಮನ ಸೆಳೆದರು.
ಇಂಥ ದೊಡ್ಡ ಮೊತ್ತದ ಯೋಜನೆಗಳನ್ನು ಮರು ವಿನ್ಯಾಸ ಮಾಡುವಾಗ ಸಂಪುಟದ ಅನುಮೋದನೆ ಅಗತ್ಯ.ಈಗ ವಿಧಾನಸೌಧ ಕಟ್ಟಿದ್ದೇವೆ ಎಂದು ಅದನ್ನು ಏಕಾಏಕಿ ಮರು ವಿನ್ಯಾಸಗೊಳಿಸಲು ಆಗದು.ತಂತ್ರಜ್ಞರ ಅಭಿಪ್ರಾಯ ಪಡೆಯಬೇಕು.ಇಲ್ಲಿ ಅದು ಏನೂ ಆಗಿಲ್ಲ.ಕುಣಿಗಲ್ಗೆ ಈಗಿರುವ ನಾಲೆಯಲ್ಲಿ ನೀರು ಪೂರೈಸಲು ನಮಗೆ ಯಾವ ಅಭ್ಯಂತರವೂ ಇಲ್ಲ.ಆದರೆ,ಹೀಗೆ ವಿನ್ಯಾಸ ಬದಲಾವಣೆ ಮಾಡುವುದರಿಂದ ಗುಬ್ಬಿ,ಕೊರಟಗೆರೆ,ಮಧುಗಿರಿ,ಶಿರಾ, ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಕುಡಿಯುವ ನೀರು ಯೋಜನೆ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳ ದೊಡ್ಡ ಜನಸಂಖ್ಯೆಗೆ ಅನ್ಯಾಯವಾಗುತ್ತದೆ ಎಂದು ವಿವರಿಸಿದರು.
ಸದ್ಯ ಈ ಯೋಜನೆಯನ್ನು ಹೇಗೆ ವಿನ್ಯಾಸ ಮಾಡಿದ್ದಾರೆ ಎಂದರೆ 12 ಅಡಿಯಷ್ಟು ಅಗಲದ ಕೊಳವೆ ಅಳವಡಿಸಿರುವುದ ರ ಜೊತೆಗೆ ಗ್ರಾವಿಟಿ ಇರುವುದರಿಂದ ಎಲ್ಲ ನೀರು ಆ ಕಡೆಗೇ ಹರಿದು ಹೋಗಿ ಉಳಿದ ಕಡೆ ನೀರು ಹೋಗದಂತೆ ಮಾಡಿದ್ದಾರೆ.ಇದರಿಂದ 400 ಕ್ಯುಸೆಕ್ ನೀರು ಹರಿಯುವ ಕಡೆ 800 ಕ್ಯುಸೆಕ್ ನೀರು ಹರಿದರೆ ಉಳಿದ ಕಡೆ ನೀರು ಹೇಗೆ ಹೋಗುತ್ತದೆ ಎಂದು ಅವರು ಪ್ರಶ್ನಿಸಿದರು.
ಹಿಂದಿನ ತಾಂತ್ರಿಕ ವರದಿಯ ಅನುಸಾರವೇ ಕುಣಿಗಲ್ ಭಾಗಕ್ಕೆ 1,400 ಕ್ಯುಸೆಕ್ ನೀರು ಹರಿಸಬಹುದು ಎಂದು 600 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲೆ ಆಧುನಿಕರಣ ಮಾಡಿರುವಾಗ ಈಗ ಮತ್ತೆ 1,000 ಕೋಟಿ ರೂಪಾಯಿ ಖರ್ಚು ಮಾಡಿ ಲಿಂಕ್ ಕೆನಾಲ್ ಯೋಜನೆ ರೂಪಿಸುವ ಅಗತ್ಯ ಏನಿದೆ? ಒಂದೇ ಪ್ರದೇಶಕ್ಕೆ ನೀರು ಪೂರೈಸಲು ಎರಡೆರಡು ಯೋಜನೆ ಏಕೆ ಬೇಕು? ಈ ಯೋಜನೆಯ ವಿರುದ್ಧ ಎಲ್ಲ ಜನಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಪಾದಯಾತ್ರೆಯೂ ನಡೆದಿವೆ.ಅದನ್ನು ಮೀರಿಯೂ ಈ ಯೋಜನೆ ಮುಂದುವರಿಸಿದರೆ ಆರು ವಿಧಾನಸಭಾ ಕ್ಷೇತ್ರಗಳ ಜನರ ಬಾಯಿಗೆ ವಿಷ ಹಾಕಿದಂತೆ ಆಗುತ್ತದೆ.ಅದಕ್ಕಾಗಿ ಕಾವೇರಿ ನೀರಾವರಿ ನಿಗಮದ ಅಧ್ಯಕ್ಷರಾದ ಮುಖ್ಯಮಂತ್ರಿಗಳು ಈ ರೀತಿಯ ರಾಜಕಾರಣ ಮಾಡಬಾರದು.ಇದನ್ನು ಕೈ ಬಿಡಬೇಕು ಎಂದು ವಿನಂತಿ ಮಾಡುವೆ ಎಂದು ಅವರು ಹೇಳಿದರು.
ರಾಮನಗರ ಜಿಲ್ಲೆಗೆ .6 (ಪಾಯಿಂಟ್ 6 ) ಟಿಎಂಸಿ ನೀರು ತೆಗೆದುಕೊಂಡು ಹೋಗುವುದು ಕಾನೂನು ಬಾಹಿರ. ಇಂಥ ಯೋಜನೆಯನ್ನು ದೇಶದಲ್ಲಿ ಎಲ್ಲಿಯೂ ಮಾಡಿಲ್ಲ.ಇದಕ್ಕೆ ಉಪಮುಖ್ಯಮಂತ್ರಿಗಳು ಏಕೆ ಇಷ್ಟು ಮುತುವರ್ಜಿ ವಹಿಸಿದ್ದಾರೆಯೋ ತಿಳಿಯದು.ಈ ಯೋಜನೆ ಕೈ ಬಿಡಬೇಕು ಎಂದು ನಾನು ಇಡೀ ಸದನದ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು.
ಇದಕ್ಕೆ ಜೆ.ಡಿ.ಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಧ್ವನಿಗೂಡಿಸಿ ಇಷ್ಟು ಬೃಹತ್ ಕೊಳವೆ ಹಾಕಿ ನೀರನ್ನು ತಿರುಗಿಸಿದರೆ ಉಳಿದ ರೈತರ ಗತಿಯೇನು ಎಂದು ಪ್ರಶ್ನಿಸಿದರು.
ಕುಣಿಗಲ್ಗೆ ನೀರು ಹರಿದಿಲ್ಲ-ಕೃಷ್ಣ ಬೈರೇಗೌಡ
ಜಲಸಂಪನ್ಮೂಲ ಸಚಿವರ ಪರವಾಗಿ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡರು,ಸಂಪುಟದಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ.ನಾವು ಯಾರಿಗೂ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ.ಈ ಯೋಜನೆ ಭಾಗಶಃ ಆಧುನೀಕರಣ ಆಗಿದೆ.ಇನ್ನೂ ಪೂರ್ತಿಯಾಗಿಲ್ಲ.ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 24 ಟಿಎಂಸಿ ಅಡಿ ನೀರು ಸಿಗುವಂತೆ ಮಾಡುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಭರವಸೆ ಕೊಟ್ಟರು.
ಈಗಿನ ಯೋಜನೆಯಿಂದ ಕುಣಿಗಲ್ ಮತ್ತು ಮಾಗಡಿ ಕಡೆ ನೀರು ಹರಿಯುತ್ತಿಲ್ಲ ಎಂದು ಸಚಿವರು ಹೇಳಿದಾಗ ನೀವು ಸದನಕ್ಕೆ ತಪ್ಪು ಮಾಹಿತಿ ಕೊಡುತ್ತಿದ್ದೀರಿ ಎಂದು ಸುರೇಶಗೌಡರು ತೀವ್ರವಾಗಿ ಆಕ್ಷೇಪಿಸಿದರು.
ಸಚಿವರ ಉತ್ತರದಿಂದ ಸಮಾಧಾನಗೊಳ್ಳದ ಶಾಸಕರು ಇದು ಸ್ವಾರ್ಥದ ಯೋಜನೆ,ಯಾರನ್ನೋ ಸಮಾಧಾನ ಮಾಡಲು ಇದನ್ನು ರೂಪಿಸಿದ್ದಾರೆ.ಇದನ್ನು ಕೈ ಬಿಡಲೇಬೇಕು.ನೀವು ಹೇಗೆ ನೀರು ತೆಗೆದುಕೊಂಡು ಹೋಗುತ್ತೀರಿ ಎಂಬುದನ್ನು ನಾವು ನೋಡಿಯೇ ಬಿಡುತ್ತೇವೆ ಎಂದು ಕೋಲಾಹಲದ ನಡುವೆ ಸವಾಲು ಹಾಕಿದರು.
ತುಮಕೂರು ವಿಶ್ವವಿದ್ಯಾಲಯಕ್ಕೆ ರಸ್ತೆ :
ತುಮಕೂರು ವಿಶ್ವವಿದ್ಯಾಲಯದ ಬಿದರಕಟ್ಟೆಯ ಹೊಸ ಕ್ಯಾಂಪಸ್ಗೆ ರಸ್ತೆ ಸೌಲಭ್ಯ ಇಲ್ಲದೇ ಇರುವ ಕುರಿತು ಸುರೇಶಗೌಡರು ಸದನದ ಗಮನ ಸೆಳೆದರು. ಇದಕ್ಕೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರು ಇದು ತಮ್ಮ ಇಲಾಖೆಯ ವ್ಯಾಪ್ತಿಗೆ ಬರದೆ ಇರುವುದರಿಂದ ತಮಗೆ ಕಾಲಾವಕಾಶಬೇಕು ಎಂದು ಕೋರಿದರು.
ಗ್ರಾಮೀಣ ರಸ್ತೆಗಳ ಕೆಲಸವನ್ನೂ ಲೋಕೋಪಯೋಗಿ ಇಲಾಖೆ ಮಾಡಬೇಕು ಎಂದು ಸುರೇಶಗೌಡರು ಆಗ್ರಹಿಸಿದಾಗ ಸದನದಲ್ಲಿ ಉಪಸ್ಥಿತರಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು,ವಿಶ್ವವಿದ್ಯಾಲಯಕ್ಕೆ ರಸ್ತೆ ಮಾಡಿಸುವುದು ನಮ್ಮ ಜವಾಬ್ದಾರಿ,ಸದಸ್ಯರ ಜತೆ ಚರ್ಚಿಸಿ ಆ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದಾಗ ವಿಷಯ ಪ್ರಸ್ತಾಪಸಿದ್ದ ಸುರೇಶಗೌಡರು ಧನ್ಯವಾದ ಹೇಳಿದರು.