ತುಮಕೂರು-ದರಖಾಸ್ತು ದುರಸ್ತಿ ಪೋಡಿ ಮಾರ್ಗಸೂಚಿ ನಿಯಮಗಳ ಸರಳೀಕರಣ-ಅವಕಾಶ ಬಳಸಿಕೊಳ್ಳುವಂತೆ ರೈತರಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ

ತುಮಕೂರು-ಹಲವಾರು ವರ್ಷಗಳಿಂದ ಪೋಡಿ ದುರಸ್ತಿಗೊಳ್ಳದೆ ಬಾಕಿ ಉಳಿದುಕೊಂಡಿದ್ದ ಜಮೀನುಗಳನ್ನು ಕನಿಷ್ಠ ಮಂಜೂರಿ ದಾಖಲೆಗಳ ಪರಿಶೀಲನೆ ನಡೆಸಿ ಹೊಸ ಪಹಣಿ ಸೃಜಿಸುವ ಮೂಲಕ ರೈತರ ದರಖಾಸ್ತು ಮತ್ತು ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಕಂದಾಯ ಇಲಾಖೆಯು ದರಖಾಸ್ತು ದುರಸ್ತಿ ಪೋಡಿ ಮಾರ್ಗಸೂಚಿ ನಿಯಮಗಳನ್ನು ಸರಳೀಕರಣಗೊಳಿಸಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.

ಭೂ ಮಂಜೂರಿಯoತೆ ಸರ್ಕಾರಿ ಸರ್ವೇ ನಂಬರುಗಳಿoದ ಪ್ರತ್ಯೇಕಿಸಿ ಹಿಡುವಳಿ ಭೂಮಿಯನ್ನಾಗಿಸುವ ಪೋಡಿ ದುರಸ್ತಿಯ ಪ್ರಕ್ರಿಯೆಯಲ್ಲಿನ ಕಠಿಣ ನಿಯಮಗಳನ್ನು ಸರ್ಕಾರ ಸರಳೀಕರಣ ಮಾಡಿರುವ ಪರಿಣಾಮ ಸರ್ಕಾರಿ ನಂಬರುಗಳಲ್ಲಿನ ಮಂಜೂರಿ ರೈತಾಪಿ ವರ್ಗದವರಿಗೆ ಈ ನಿಯಮಗಳಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ದರಖಾಸ್ತು ಮತ್ತು ಪೋಡಿ ದರಖಾಸ್ತು ಮತ್ತು ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸರ್ಕಾರವು ನಮೂನೆ 1-5ನ್ನು ತಯಾರಿಸುವ ಪ್ರಕ್ರಿಯೆಯನ್ನು ಸರಳೀಕರಿಸಿದ್ದು, ಕನಿಷ್ಠ 3 ಮಂಜೂರಿ ದಾಖಲೆಗಳು ಲಭ್ಯವಿದ್ದಲ್ಲಿ ತಹಶೀಲ್ದಾರ್‌ಗಳು ನೈಜತೆ ಪರಿಶೀಲಿಸಿ ಪೋಡಿಗೆ ಕ್ರಮವಹಿಸಲು ಆದೇಶ ನೀಡಲಿದ್ದಾರೆ.

ನಮೂನೆ 1-5ತಯಾರಿಸಲು ಹೊಸದಾಗಿ ತಂತ್ರಾoಶವನ್ನೂ ಸಹ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಒಂದು ಸರ್ವೆ ನಂಬರಿಗೆ ಸಂಬoಧಿಸಿದ ಎಲ್ಲ ಮಂಜೂರಿ ದಾಖಲೆಗಳನ್ನು ಕ್ರೋಢೀಕರಿಸಿ ನಮೂನೆ 1-5ನ್ನು ತಂತ್ರಾoಶದಲ್ಲಿ ದಾಖಲಿಸಿ, ಮಂಜೂರಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಂತ್ರಾoಶದಲ್ಲಿ ಸoರಕ್ಷಿಸಲಾಗುವುದು.

ದರಖಾಸ್ತು ಪೋಡಿಯನ್ನು ಆಂದೋಲನದ ರೂಪದಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 100ಮಂಜೂರಿದಾರರು ಸೇರಿ ಒಟ್ಟು 1000 ಮಂಜೂರಿದಾರರಿಗೆ 2025ರ ಜನವರಿ 26ರೊಳಗಾಗಿ ನಮೂನೆ 1 ರಿಂದ 5ನ್ನು ಭರ್ತಿ ಮಾಡಿ ಪೋಡಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿ ಸಬೇಕೆಂದು ಆಯಾ ತಾಲ್ಲೋಕಿನ ತಹಶೀಲ್ದಾರ್ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ತಂತ್ರಾoಶದಲ್ಲಿ ಭೂ ಮಂಜೂರಿಯಾಗಿರುವ ಸರ್ಕಾರಿ ಸರ್ವೆ ನಂಬರ್ ಡಾಟಾ ಎಂಟ್ರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಅಳತೆ ದುರಸ್ತಿ ಪ್ರಕ್ರಿಯೆಯನ್ನು ಸಹ ಕೈಗೊಂಡು ಮಂಜೂರಿ ದಾರರಿಗೆ ಹೊಸ ಪಹಣಿ ದಾಖಲೆ ಸೃಜಿಸುವ ಬಗ್ಗೆ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?