ಚಿಕ್ಕಮಗಳೂರು-ದೈನಂದಿನ ಬದುಕಿನಲ್ಲಿ ತನು, ಮನ,ನುಡಿ ಕನ್ನಡವಾಗಿರಬೇಕು.ಹತ್ತಾರು ಭಾಷೆ ಕಲಿತರೆ ತಪ್ಪೇನಿಲ್ಲ, ಮುಖ್ಯವಾಗಿ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಶಿರವಾಸೆ ಗ್ರಾಮದ ಶ್ರೀ ಗಜಾನನ ಕಲಾಮಂದಿರದಲ್ಲಿ ಜಾಗರ ಕಸಾಪ ಹೋಬಳಿ ಘಟಕ ದಿಂದ ಏರ್ಪಡಿಸಿದ್ಧ 69ನೇ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಸಂಜೆ ಪಾಲ್ಗೊಂಡು ಅವರು ಮಾತನಾಡಿದರು.
ಜೀವನೋದ್ಯಕ್ಕಾಗಿ ಯಾವುದೇ ರಾಜ್ಯ ಅಥವಾ ವಿದೇಶಗಳಿಗೆ ತೆರಳಿ ಸ್ಥಳೀಯ ಭಾಷೆ ಕಲಿತು ಕೊಂಡರೆ ತಪ್ಪೇನಿಲ್ಲ. ಜೊತೆಗೆ ಕನ್ನಡ ಭಾಷೆಯ ಸ್ವಾಭಿಮಾನ, ಘನತೆ ಹಾಗೂ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಹೀಗಾಗಿ ಕನ್ನಡಿಗರಾದ ನಾವುಗಳು ಎಲ್ಲೇ ತೆರಳಿದರೂ ಭಾಷೆಯ ಸೊಗಡನ್ನು ಇತರರಿಗೂ ಪರಿಚಯಿ ಸಬೇಕು ಎಂದು ಹೇಳಿದರು.
ನಾಡಿನ ನೆಲದಲ್ಲಿ ಜನಿಸಿರುವ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಎಂದಿಗೂ ನಶಿಸದಂತ ವಿಶೇಷ ಶಕ್ತಿಯಿದೆ. ಆಯಾಯ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಗೌರವಿಸಿದಂತೆ,ಕನ್ನಡಿಗರಾದ ನಾವುಗಳು ನಮ್ಮ ತಾಯ್ನನುಡಿಗೆ ಎಲ್ಲದಕ್ಕಿಂತ ಒಂದುಪಟ್ಟು ಹೆಚ್ಚು ಪ್ರೀತಿಸುವ ಕಾಳಜಿ ಹೊಂದಬೇಕು ಎಂದರು.
ಇಡೀ ಜಿಲ್ಲೆಯಲ್ಲಿ ಜಾಗರ ಕಸಾಪ ಹೋಬಳಿ ಘಟಕ ರಾಜ್ಯೋತ್ಸವವನ್ನು ಪ್ರತಿವರ್ಷವು ವಿಜ್ರಂಭಣೆಯಿoದ ಆಚರಿಸುತ್ತಿದೆ. ಗ್ರಾಮದ ಸುತ್ತಮುತ್ತಲು ಕನ್ನಡಧ್ವಜ ಹಾಕುವುದು, ಕರಪತ್ರ ಅಂಟಿಸಿರುವುದು ಅಲ್ಲದೇ ಮನೆ ಮನೆಗಳಿಗೆ ತೆರಳಿ ರಾಜ್ಯೋತ್ಸವ ಆಚರಣೆಗೆ ಆಹ್ವಾನಿಸುವ ಮುಖಾಂತರ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾಗಿರುವುದು ಖುಷಿಯ ಸಂಗತಿ ಎಂದು ಮೆಚ್ಚುಗೆ ಸೂಚಿಸಿದರು.
ಸಿರಿಗನ್ನಡ ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಕನ್ನಡಾಂಭೆ ನಾಡಿನಲ್ಲಿ ನೆಲೆಯೂರಲು ಹಲವಾರು ದಾರ್ಶನಿಕರು,ಕೀರ್ತನೆಕಾರರು,ಕವಿಸಾಹಿತಿಗಳು ಹಾಗೂ ರಾಜ ಮಹಾರಾಜರ ವಿಶೇಷ ಕೊಡುಗೆಯಿದೆ ಎಂದ ಅವರು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಇಂದಿನ ಯುವ ಸಮೂಹ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಹೋಬಳಿ ಅಧ್ಯಕ್ಷ ವಾಸು ಪೂಜಾರಿ ಭಾಷೆ ಬೆಳವಣಿಗೆಗೆ ಅನಾದಿ ಕಾಲದಿಂದಲೇ ಕದಂಬರು, ಚಾಲುಕ್ಯರು, ವಿಜಯನಗರದ ಅರಸರು, ದಾಸ, ವಚನ ಸಾಹಿತ್ಯಾಸಕ್ತರ ಸಹಕಾರ ಬಹಳಷ್ಟಿದೆ. ಈ ಸೊಗಡಿನಿಂದಲೇ ಇಂದು ವಿಶ್ವದಲ್ಲೇ ಕನ್ನಡವು ತನ್ನದೇ ವಿಶಿಷ್ಟ ಪರಂಪರೆ ಹೊಂದಿದೆ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಮಹಾಭಾರತದ ಸನ್ನಿವೇಶದಲ್ಲಿ ಶಕುನಿಯ ಏಕಾಪಾತ್ರಭಿನಯ ನಿರ್ವಹಿಸಿ ಗ್ರಾಮಸ್ಥರ ಹಾಗೂ ಮಕ್ಕಳ ಪ್ರಶಂಸೆಗೆ ಪಾತ್ರರಾದರು. ಇದೇ ವೇಳೆ ರಾಜ್ಯೋ ತ್ಸವ ಅಂಗವಾಗಿ ಏರ್ಪಡಿಸಿದ್ಧ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರವನ್ನು ವಿವಿಧ ಕಲಾತಂಡಗಳೊoದಿಗೆ ಗ್ರಾಮದ ಸುತ್ತಮುತ್ತಲು ಮೆರವಣಿಗೆ ನಡೆಸಲಾಯಿತು. ನಂತರ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಕಲಚೇತನರಿಂದ ರಸಮಂಜರಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಸಾಪ ನಗರಾಧ್ಯಕ್ಷ ಸಚಿನ್ಸಿಂಗ್, ಹೋಬಳಿ ಕಸಾಪ ಮಾಜಿ ಅಧ್ಯಕ್ಷರಾದ ಚಂ ದ್ರೇಗೌಡ, ಕೆ.ವಿ.ರವಿಕುಮಾರ್, ಮುಖoಡರಾದ ಶಂಕರ್, ಜೆ.ಸಿ.ಲಕ್ಷ್ಮಣ್, ದೇಜು, ವೆಂಕಟೇಶ್, ಡಿ.ಜೆ. ಶ್ಯಾಮಲಾ, ಕಾಫಿ ಬೆಳೆಗಾರ ಹೆಚ್.ಎಸ್. ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.
————–ಸುರೇಶ್