ಕೆ.ಆರ್.ಪೇಟೆ-ಮಠ-ಮಾನ್ಯಗಳು,ಧಾರ್ಮಿಕ ಸಂಸ್ಥೆಗಳು ಮಾಡುತ್ತಿರುವ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಸೇವೆಗಳಿಂದ ಸಮಾಜದಲ್ಲಿ ಶಾಂತಿ- ಸೌರ್ಹಾಧತೆ ಹೆಚ್ಚಾಗುತ್ತಿದೆ.ಉತ್ತಮ ಸಮಾಜ ನಿರ್ಮಾಣಕ್ಕೆ ನಾಡಿನ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಅವರು ಹೇಳಿದರು.
ಅವರು ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಮಠದ ಹತ್ತನೇ ವರ್ಷದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ, ಪೌರಕಾರ್ಮಿಕರು, ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪಂಚಶ್ರೀ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎಲೆಮರೆಯ ಕಾಯಿಗಳಂತೆ ಸಮಾಜದ ವಿವಿಧ ಸ್ತರಗಳಲ್ಲಿ ಕೆಲಸ ಮಾಡುತ್ತಿರುವ ನೈಜ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಮೂಲಕ ಇನ್ನಷ್ಟು ಸಮಾಜಮುಖಿಯಾಗಿ ಕೆಲಸ ಮಾಡಲು ಉತ್ತೇಜಿಸಿ ಪ್ರೇರೇಪಿಸುತ್ತಿರುವ ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಮಠದ ಕಾರ್ಯವು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ. ನಮ್ಮ ವಿಧಾನಸಭಾ ಕ್ಷೇತ್ರದ ಬೆಡದಹಳ್ಳಿ ಗ್ರಾಮದ ಶ್ರೀ ಪಂಚಭೂತೇಶ್ವರ ಮಠದ ಹತ್ತು ವರ್ಷಗಳ ಸಾಧನೆಯನ್ನು ಸ್ಮರಿಸಿ ಶ್ರೀ ಮಠದ ಭಕ್ತರಿಗೆ ಅನುಕೂಲವಾಗುವಂತೆ ಒಂದು ಹೈಮಾಸ್ಕ್ ದೀಪವನ್ನು ತಮ್ಮ ಶಾಸಕರ ಅನುಧಾನದಿಂದ ಹಾಕಿಸಿಕೊಡುವುದಾಗಿ ಭರವಸೆ ನೀಡಿದರು.
ಶ್ರೀ ಮಠವು ಕೋವಿಡ್ ವೇಳೆ ಹಲವಾರು ಗ್ರಾಮಗಳ ಬಡವರಿಗೆ ಉಚಿತವಾಗಿ ಅನ್ನಧಾನ ಮಾಡಿದ್ದು ಇದು ಮಠದ ಕೀರ್ತಿಯನ್ನು ಹೆಚ್ಚಿಸಿದೆ. ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರವು ಜನರಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ನಮ್ಮ ಕನ್ನಡ ನಾಡಿನಲ್ಲಿ ಮಠ-ಮಾನ್ಯಗಳಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆರೋಗ್ಯ ಸೇವೆಯನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಪ್ರಮುಖವಾಗಿ ಚುಂಚನಗಿರಿ ಮಠ, ಸಿದ್ದಗಂಗಾಮಠ, ಸುತ್ತೂರು ಮಠ ಸೇರಿದಂತೆ ಹತ್ತು ಹಲವು ಧಾರ್ಮಿಕ ಮಠಗಳು ತ್ರಿವಿಧ ದಾಸೋಹ ಕಾರ್ಯದ ಮೂಲಕ ನಾಡಿನ ಕೋಟಿ ಕೋಟಿ ಜನರ ಮನೆ ಗೆದ್ದಿವೆ. ಇದೇ ರೀತಿ ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರವು ಸಾಧನೆ ಮಾಡಲಿ, ಇದಕ್ಕೆ ನಮ್ಮ ಕಡೆಯಿಂದ ಸಾಧ್ಯವಾದಷ್ಟು ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು. ಜೊತೆಗೆ ಶ್ರೀ ಕ್ಷೇತ್ರಕ್ಕೆ ಬರುವ ರಸ್ತೆಯ ಅಭಿವೃದ್ದಿ, ಮಠದ ಆವರಣದಲ್ಲಿ ಸಮುದಾಯ ಭವನ ಅಥವಾ ಸಭಾ ಭವನ ನಿರ್ಮಾಣ ಮಾಡಿದರೆ ಅಗತ್ಯ ಅನುಧಾನ ನೀಡುವ ಭರವಸೆಯನ್ನು ಶಾಸಕ ಹೆಚ್.ಟಿ.ಮಂಜು ಅವರು ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಸ್ಥಾನಕ್ಕೆ ನಾವು ಪೂಜೆಗೆ ಹಣ್ಣು-ಕಾಯಿ ತೆಗೆದುಕೊಂಡು ಹೋಗುವಾಗ ಹಣ್ಣು-ಕಾಯಿ ಅನ್ನುತ್ತೇವೆ. ಆದರೆ ದೇವರೆ ಪೂಜೆ ಸಲ್ಲಿಸಿ ವಾಪಸ್ ಬರುವಾಗ ಅದನ್ನೇ ಪ್ರಸಾದ ಎನ್ನುತ್ತೇವೆ. ಹಾಗೆಯೇ ದೇವಾಲ ಯಕ್ಕೆ ಹೋಗುವಾಗ ನಮ್ಮಲ್ಲಿನ ಕೆಟ್ಟತನಗಳು ದೂರವಾಗಿ, ವಾಪಸ್ ಮನೆಗೆ ಬರುವಾಗ ಒಳ್ಳೆಯ ವ್ಯಕ್ತಿಗಳಾಗಿ ಬರಬೇಕು. ಇದಕ್ಕೆ ನಾವು ಧಾರ್ಮಿಕ ಸಂಸ್ಥೆಗಳು, ದೇವಾಲಯಗಳು ಎನ್ನುತ್ತೇವೆ. ನಾವು ಯಾವುದೇ ವಸ್ತುವನ್ನು ಮಾರುಕಟ್ಟೆಯಲ್ಲಿ ಕೊಂಡು ಕೊಳ್ಳಬಹುದು. ಆದರೆ ಶಾಂತಿ-ನೆಮ್ಮದಿಯು ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಕೇವಲ ದೇವರ ಸನ್ನಿದಿಯಲ್ಲಿ, ಧಾನ ಧರ್ಮ ಮಾಡುವಲ್ಲಿ, ತಂದೆ, ತಾಯಿಗಳ ಸೇವೆ ಮಾಡುವುದರಿಂದ ಮಾತ್ರ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳಬಹುದು ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿಗಳ ಸೇವೆ ಮಾಡಬೇಕು. ತಾನು ದುಡಿದ ಹಣದಲ್ಲಿ ಸ್ವಲ್ಪ ಬಡವರಿಗೆ ದಾನ ಮಾಡಬೇಕು. ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಬೇಕು ಇದರಿಂದ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜ್ಯ ವಿಕಲಚೇತನ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ರಾಜಣ್ಣ ಮಾತನಾಡಿ,ನಾನು ರಾಜ್ಯ ವಿಕಲಚೇತನ ಕಲ್ಯಾಣ ಆಯೋಗದ ಅಧ್ಯಕ್ಷನಾಗಿ 3ವರ್ಷಗಳ ಕಾಲ ಕೆಲಸ ಮಾಡಿ ವಿಕಲಚೇತನರ ಕಲ್ಯಾಣ ಹಾಗೂ ಸರ್ಕಾರದ ವತಿಯಿಂದ ನೀಡುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ನಾನು ಅತ್ಯುತ್ತಮವಾಗಿ ಕೆಲಸ ಮಾಡಿದ್ದೇನೆ.ವಿಕಲಚೇತನರು ಕೂಡ ನಾಗರಿಕ ಸಮಾಜದಲ್ಲಿ ಎಲ್ಲರಂತೆ ನೆಮ್ಮದಿಯಿಂದ ಜೀವನ ನಡೆಸಲು ಒಬ್ಬ ವಿಕಲಾಂಗನಾಗಿ ನಾನು ದಾರಿ ಮಾರ್ಗವನ್ನು ತೋರಿಸಿಕೊಟ್ಟಿದ್ದೇನೆ. ನನ್ನ ಸಮಾಜಮುಖಿ ಕೆಲಸವನ್ನು ಗುರ್ತಿಸಿರುವ ಕೇಂದ್ರದ ನರೇಂದ್ರಮೋಧಿಜಿ ಅವರ ಸರ್ಕಾರವು ಪದ್ಮಶ್ರೀ ಪ್ರಶಸ್ತಿಗೆ ನನ್ನನ್ನು ಗುರುತಿಸಿ ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಭಾರತ ದೇಶದ ಮಟ್ಟದಲ್ಲಿ ಬೆಳಗಲು ಅವಕಾಶ ಮಾಡಿಕೊಟ್ಟಿದೆ ಎಂದು ಅಭಿಮಾನದಿಂದ ಹೇಳಿದ ಡಾ.ರಾಜಣ್ಣ ಅಂಗವಿಕಲತೆ ಶಾಪವಲ್ಲ, ವಿಕಲ ಚೇತನರಿಗೆ ನಾಗರೀಕ ಸಮಾಜದಲ್ಲಿ ವೇದಿಕೆಯನ್ನು ಕಲ್ಪಿಸಿಕೊಟ್ಟರೆ ಸಾಕು. ಅವರು ಎಲ್ಲರಂತೆಯೇ ಸಾಧನೆ ಮಾಡುತ್ತಾರೆ ಎಂದು ಹೇಳಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಕಲಚೇತನ ಪ್ರತಿಭೆ ಡಾ.ರಾಜಣ್ಣ, ಮಹಿಳಾ ಹೋರಾಟ ಗಾರ್ತಿ ರಜನಿರಾಜ್, ಸಮಾಜ ಸೇವಕ ಕುಂದೂರು ಮೊಟ್ಟೆ ಮಂಜು, ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅವರಿಗೆ ಶ್ರೀ ಕ್ಷೇತ್ರದ ಪ್ರತಿಷ್ಠಿತ ಪಂಚಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಬೆಡದಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ವಹಿಸಿದ್ದರು. ಹುಣಸೂರಿನ ದೇವನೂರು ಮಹಾಸಂಸ್ಥಾನ ಮಠದ ಡಾ.ಶ್ರೀ ಮಾದೇಶ್ ಗುರೂಜಿ, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕೆ.ಆರ್.ನಗರದ ಕಾಗಿನೆಲೆ ಕನಕ ಗುರುಪೀಠ ಶ್ರೀ ಶಿವಾನಂದಪುರಿ ಸ್ವಾಮೀಜಿ, ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಪರಮಪೂಜ್ಯ ಶ್ರೀ ಡಾ.ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ರಾಮಯೋಗೀಶ್ವರ ಮಠ ಬೇಬಿ ಮಠ ಶಿವಬಸವ ಸ್ವಾಮೀಜಿ, ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಹಾಗೂ ಶಂಭುನಾಥ ಸ್ವಾಮೀಜಿ, ಯವರು ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿರಿದ್ದು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಜಾನಪದ ಜಾದೂಗಾರ ಕಡಬ ಶ್ರೀನಿವಾಸ್, ಭರತನಾಟ್ಯ ಕಲಾವಿದೆ ವಿಧುಷಿ ಕ್ಯಾತನಹಳ್ಳಿಯ ಕೌಸ್ತುಭಕೇಶವಸ್ವಾಮಿ, ಸರ್ಕಾರಿ ಪದವಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಉದ್ಯಮಿ ಡಾ.ಕೆ.ಎಸ್.ರಾಜೇಶ್, ಡಾ.ರಾಜಶೇಖರ್ ಹಾಗೂ ವೇದಬ್ರಹ್ಮ ಡಾ.ಅರುಣಕುಮಾರ್ ಶಾಸ್ತಿç, ಅಂತಾರಾಷ್ಟ್ರೀಯ ಯೋಗಪಟು ಅಲ್ಲಮಪ್ರಭು, ಟಿಎಪಿಸಿಎಂಎಸ್ ನಿರ್ದೇಶಕ ಕೊರಟೀಕೆರೆ ಕೆ.ಎಸ್.ದಿನೇಶ್ ಸೇರಿದಂತೆ ಹಲವು ಸಾಧಕನ್ನು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಕೃಷ್ಣೇಗೌಡ, ಕೊರಟೀಕೆರೆ ದಿನೇಶ್, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಬೇರ, ಮಾಜಿ ಉಪಾಧ್ಯಕ್ಷ ದಿನೇಶ್, ಶ್ರೀಮಠದ ಕಾರ್ಯದರ್ಶಿ ಕಾಂತರಾಜು, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯೆ ಶಿವಮ್ಮ, ಪುರಸಭೆಯ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ತಾಲ್ಲೂಕು ಎಳನೀರು ವ್ಯಾಪಾರಿಗಳ ಸಂಘದ ಅಧ್ಯಕ್ಷ ಭಾರತೀಪುರ ಪುಟ್ಟಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಜಿ.ಪಿ.ರಾಜು, ವಿ.ಲೋಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
——————–ಶ್ರೀನಿವಾಸ್ ಆರ್