ಚಿಕ್ಕಮಗಳೂರು-ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಗಳಿಗೆ ರಾಜ್ಯಸರ್ಕಾರ ಅನುದಾನ ಬಿಡುಗಡೆ ಮಾಡದಿ ರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಗಳ ಮೋರ್ಚಾದ ನೇತೃತ್ವದಲ್ಲಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಕಾರ್ಯಕರ್ತರು ಮುಖ್ಯ ಮಂತ್ರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ರಾಜ್ಯಸರ್ಕಾರದ ಸಚಿವರು, ಶಾಸಕರುಗಳ ಜನಪರ ಅಭಿವೃದ್ದಿ ಕಾರ್ಯಗಳನ್ನು ಕುಂಠಿತಗೊಳಿಸಿದೆ.ಕೇವಲ ವೈಯಕ್ತಿಕ ಲಾಭವನ್ನು ಹೆಚ್ಚಳಗೊಳಿಸಿ ಸರ್ಕಾರದ ಸಾವಿರಾರು ಕೋಟಿ ಹಣವನ್ನು ಹಗಲು ದರೋಡೆ ನಡೆಸುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್‌ನ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸುತ್ತಿದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡ ಸಿದ್ದರಾಮಯ್ಯ ಯಾವುದೇ ಜಿಲ್ಲೆ ಅಥವಾ ತಾಲ್ಲೂಕಿಗೆ ಅನುದಾನ ನೀಡಿಲ್ಲ.ಕೇವಲ ಗ್ಯಾರಂಟಿ ಯೋಜನೆಗೆ ಒದಗಿಸುವುದೇ ದೊಡ್ಡ ಸಾಧನೆಯಾಗುತ್ತಿದೆ ಎಂದು ಟೀಕಿಸಿದರು.
ಜನಸಾಮಾನ್ಯರ ಬದುಕಿನಲ್ಲಿ ಆಟವಾಡುವ ಜೊತೆಗೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಪ್ರಕರಣ ದಾಖಲಿಸುವುದು, ಸಂಘಟನೆ ಮುಖಂಡರುಗಳನ್ನು ಅವಮಾನಿಸಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಅಲ್ಲದೇ ಬಿಜೆಪಿ ಶಾಸಕರುಗಳ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸಿ ರಾಜ್ಯಸರ್ಕಾರ ತಾರತಮ್ಯವೆಸಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಕ್ಷೇತ್ರದ ಹಿಂದಿನ ಶಾಸಕರ ಅವಧಿಯಲ್ಲಿ ಇಡೀ ಜಿಲ್ಲೆಗೆ ಅಭಿವೃದ್ದಿಯ ಮಹಾಪೂರವೇ ಒದಗಿಸಿತ್ತು.ಅಲ್ಲದೇ ಸಂಸದರು, ವಿಧಾನ ಪರಿಷತ್ ಸದಸ್ಯರ ಕೊಡುಗೆಯು ಬಹಳಷ್ಟಿದೆ ಎಂದ ಅವರು 138 ಸ್ಥಾನ ಪಡೆದಿರುವ ರಾಜ್ಯಸರ್ಕಾರ ಜನತೆಯ ಋಣ ತೀರಿಸುವ ಕೆಲಸ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಇದೀಗ ಕಾಂಗ್ರೆಸ್‌ನ ಶವಪೆಟ್ಟಿಗೆಗೆ ಮೊಳೆ ಹೊಡೆಯುವ ಕೆಲಸವಾಗುತ್ತಿದೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಕನಸು ಭಗ್ನವಾಗಿದೆ. ರಾಜ್ಯದ ಜನತೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾದರೂ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾಗುವ ಸೂಚನೆಗಳು ರಾಜ್ಯದಲ್ಲಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಬಿ.ರಾಜಪ್ಪ ಮಾತನಾಡಿ, ಹಿಂದುಳಿದ ವರ್ಗದ ನೇತಾರನೆಂದು ಬಿಂಬಿಸಿಕೊಂಡು ವರ್ಗವೆಂದು ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಗಳು, ಹಿಂದುಳಿದ ಸಮುದಾಯಕ್ಕೆ ದ್ರೋಹವೆಸಗಿದ್ದಾರೆ.ಅವರಿಂದ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ನಿರೀಕ್ಷೆಯಲ್ಲಿದ್ದ ಜನಾಂಗಕ್ಕೆ ಬಹಳಷ್ಟು ನಿರಾಸೆಯಾಗಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳು ರಾಜಕೀಯ ಹಾಗೂ ಆರ್ಥಿಕವಾಗಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ.ಒಂದೆಡೆ ಸ್ವಪಕ್ಷವು ಅಧಿಕಾರದಿಂದ ಕೆಳಗಿಳಿಸಲು ಮುಂದಾದರೆ,ಗ್ಯಾರಂಟಿ ಯೋಜನೆಗೆ ಹಣ ಕ್ರೂಢೀಕರಿಸುವಲ್ಲಿ ಮುಖ್ಯಮಂತ್ರಿಗಳು ವಿಫಲತೆ ಹೊಂದಿದ್ದಾರೆ.ಈ ಕಾರಣದಿಂದ ಅಧಿಕಾರಿಗಳ ಸಭೆ ನಡೆಸದೇ ಕೇವಲ ಸರ್ಕಾರದ ಬೊಕ್ಕಸಕ್ಕೆ ಹಣ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ ಎಂದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಕಪ್ಪ, ರಾಜ್ಯದಲ್ಲಿ ಸುಮಾರು 14ಕ್ಕೂ ಹೆಚ್ಚು ಹಿಂದುಳಿದ ಅಭಿವೃದ್ದಿ ನಿಗಮಗಳಿವೆ. ಕಳೆದ ಸಾಲಿನಲ್ಲಿ ಮುಖ್ಯ ಮಂತ್ರಿಗಳು ಮಂಡಿಸಿದ ಬಜೆಟ್‌ನಲ್ಲಿ 1600 ಕೋಟಿ ರೂ. ಹಿಂದುಳಿದವರಿಗೆ ಮೀಸಲಿರಿಸಿ ವರ್ಗಕ್ಕೆ ನ್ಯಾಯ ಒದಗಿಸುತ್ತೇನೆಂದು ಹೇಳಿ, ಒಂದೂವರೆ ತಿಂಗಳು ಕಳೆದರೂ ಕೇವಲ 135 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಹಿಂದುಳಿದವರಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಬ್ಯಾಟರಿ, ಮಣೇನ ಹಳ್ಳಿ ರಾಜು, ಯೋಗೀಶ್ ಪೂಜಾರಿ, ನಗರ ಮಂಡಲ ಅಧ್ಯಕ್ಷ ಸಿ.ಟಿ.ಜಯವರ್ಧನ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರುಗಳಾದ ಪುಷ್ಪರಾಜ್, ಕುರುವಂಗಿ ವೆಂಕಟೇಶ್, ಹೆಚ್.ಕೆ.ಕೇಶವ ಮೂರ್ತಿ, ಹಿರೇಮಗಳೂರು ಪುಟ್ಟಸ್ವಾಮಿ, ಸಂತೋಷ್ ಕೋಟ್ಯಾನ್, ಸೀತಾರಾಮಭರಣ್ಯ, ಕನಕರಾಜ್, ರವೀಂದ್ರ ಬೆಳವಾಡಿ ಮತ್ತಿತರರಿದ್ದರು.
—————-–ಸುರೇಶ್