
ತುಮಕೂರು:ಸರ್ಕಾರದ ಧ್ವಂದ್ವ ನೀತಿ ಹಾಗೂ ಕ್ರಷರ್ ಮೇಲೆ ವಿಧಿಸುವ ಹೆಚ್ಚಿನ ರಾಜಧನ ಕ್ರಮವು ಕ್ರಷರ್ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.ಸರ್ಕಾರ ಕ್ರಷರ್‌ಗಳಿಗೆ ವಿಧಿಸಿರುವ ನಿಯಮಗಳನ್ನು ಸರಳೀಕರಣ ಗೊಳಿಸಬೇಕು,ಇಲ್ಲವಾದಲ್ಲಿ ರಾಜ್ಯಾದ್ಯಂತ ಕ್ರಷರ್ ಮಾಲೀಕರು ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಜಿಲ್ಲಾ ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಸಂಘದ ಕಾರ್ಯದರ್ಶಿ ಭಾಸ್ಕರ್ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಅವೈಜ್ಞಾನಿಕ ನೀತಿಗಳಿಂದಾಗಿ ಕೋಟ್ಯಾoತರ ರೂ. ಬಂಡವಾಳ ಹೂಡಿರುವ ಕ್ರಷರ್ ಉದ್ದಿಮೆದಾರರು ಸಮರ್ಪಕವಾಗಿ ಉದ್ದಿಮೆಯನ್ನು ನಡೆಸಿಕೊಂಡು ಹೋಗಲಾಗದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಹೊರೆ ಜನರ ತಲೆಮೆಲೆ ಬಿದ್ದು ಜನಸಾಮಾನ್ಯರಿಗೂ ದೊಡ್ಡ ಹೊರೆಯಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ಓಟಿಎಸ್ ಪದ್ಧತಿಯ ಬಗ್ಗೆಯೂ ಯೂನಿಯನ್ ಆಫ್ ಕರ್ನಾಟಕ ಸ್ಟೋನ್ ಕ್ರಷರ್ ಮಾಲೀಕರು ಹಲವಾರು ಬಾರಿ ಸರ್ಕಾರಕ್ಕೆ ಮತ್ತು ಇಲಾಖೆಗೆ ಮನವರಿಕೆ ಮಾಡಿಕೊಟ್ಟಿದ್ದರೂ ಗಮನಹರಿಸಿಲ್ಲ. ಈಗಾಗಲೇ ರಾಜಧನ ಸರ್ಕಾರದ ವಿವಿಧ ಕಾಮಗಾರಿಗಳಿಂದ ಭರ್ತಿಯಾಗುತ್ತಿದ್ದು ಓಟಿಎಸ್ ಪದ್ಧತಿಯಂತೆ ದಂಡ ವಿಧಿಸಿ ಮಾಲೀಕರಿಗೆ ತುಂಬಲಾಗದ ಹೊರೆಯನ್ನು ಹೊರಿಸಿದ್ದು ಆ ಹೊರೆ ಭರಿಸಲು ಸಾಧ್ಯವಿಲ್ಲ. ಈ ಪದ್ಧತಿಗೆ ನಮ್ಮ ಸಂಘವು ಕಲ್ಲುಗಣಿ ಗುತ್ತಿಗೆದಾರರ ಪರವಾಗಿ ವಿರೋಧ ವ್ಯಕ್ತಪಡಿಸುತ್ತೇವೆ.ಈ ಪದ್ಧತಿ ಜಾರಿಯಾದರೆ ಕಲ್ಲು ಗಣಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಈ ಹೊಣೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ರಾಜ್ಯ ಸರ್ಕಾರ ಹೊರಬೇಕಾಗುತ್ತದೆ ಎಂದು ಹೇಳಿದರು.
ಕಲ್ಲು ಗಣಿಗೆ ವಿಧಿಸಿರುವ ಐದು ಪಟ್ಟು ದಂಡವನ್ನು ವಜಾಗೊಳಿಸಿ ಹೆಕ್ಟೇರ್‌ಗೆ 5 ಲಕ್ಷ ರೂ. ವರೆಗೆ ದಂಡ ವಿಧಿಸಿ ಪ್ರಕರಣ ಅಂತ್ಯಗೊ ಳಿಸಬೇಕು. ನಾವು ಕಲ್ಲು ಗಣಿಯಿಂದ ತೆಗೆದ ಸರಕು ಅಥವಾ ಸ್ಟೋನ್ ಕ್ರಷರ್‌ನಿಂದ ಹೋದ ಸರಕು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಹೋಗುತ್ತದೆ. ಇಲ್ಲಿಂದ ರಾಜಧನ ಬರುತ್ತದೆ. ವರ್ಷ ವರ್ಷ ನಮ್ಮ ಕಲ್ಲು ಗಣಿಯ ಆಡಿಟ್ ಸಹ ಆಗುತ್ತದೆ. ಈಗಿರುವಾಗ ನೀವು ದಂಡ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನಾವು ಕಟ್ಟುವ ರಾಜಧನ ಈಗಾಗಲೇ ಗುತ್ತಿಗೆದಾದರಿಂದ ಸರ್ಕಾರಕ್ಕೆ ಜಮಾ ಆಗುತ್ತಾ ಬಂದಿರುತ್ತದೆ. ಆದುದರಿoದ ನಮ್ಮ ಕಲ್ಲು ಗಣಿಗೆ ಹಾಕಿದ ದಂಡದ ಬಾಬ್ತನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಕೆಎಂಎoಸಿಆರ್ ನಿಯಮದಲ್ಲಿ 5 ಪಟ್ಟು ದಂಡದ ವಿಷಯವನ್ನು ತೆಗೆದು ಹೆಕ್ಟೇರ್‌ಗೆ 5 ಲಕ್ಷ ರೂ. ವರೆಗೆ ದಂಡ ವಿಧಿಸಬೇಕು ಎಂದು ತಿದ್ದುಪಡಿ ಮಾಡಿ ಸರಳೀಕರಣ ಮಾಡಬೇಕು. ಅವೈಜ್ಞಾನಿಕವಾಗಿ ಸ್ಟೋನ್ ಕ್ರಷರ್‌ನಿಂದ ವಿದ್ಯುಚ್ಛಕ್ತಿ ಬಿಲ್ ಪಡೆಯುವುದನ್ನು ನಿಲ್ಲಿಸಬೇಕು. ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‌ನಿಂದ ಸರಕು ಸರಬರಾಜು ಮಾಡುವಂತಹ ಲಾರಿಗಳಿಗೆ ಅಳವಡಿಸಲು ಸೂಚಿಸಿರುವ ಜಿಪಿಎಸ್ ರದ್ದು ಮಾಡಬೇಕು. ರಾಜಧನವು ರಾಜ್ಯದಲ್ಲಿ ಡ್ಯೂಯಲ್ ಪಾಲಿಸಿಯಾಗಿ ಸಂಗ್ರಹವಾಗುತ್ತಿದೆ.ಈ ರಾಜಧನವನ್ನು ಕಲ್ಲು ಗಣಿ ಗುತ್ತಿಗೆದಾರರಿಂದ ಅಥವಾ ಸರ್ಕಾರಿ ಗುತ್ತಿಗೆದಾರರಿಂದ ಯಾರಾದರೂ ಒಬ್ಬರ ಕಡೆಯಿಂದ ಪಡೆಯಬೇಕು.ಸ್ಟೋನ್ ಕ್ರಷರ್ ಲೈಸನ್ಸ್ ಫಾರಂ-ಸಿ ಅವಧಿಯನ್ನು ಮುಂದಿನ 50 ವರ್ಷಗಳವರೆಗೆ ಡೀಮ್ಡ್ ಎಕ್ಸ್ಟೆನ್ಷನ್ ಮಾಡಿಕೊಡಬೇಕು ಎಂದು ಭಾಸ್ಕರ್ ಒತ್ತಾಯಿಸಿದರು.
ಕ್ವಾರಿ ಮಾಲೀಕರಾದ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಬಿ.ಎಸ್.ನಾಗೇಶ್, ಗಣೇಶ್,ಅನೀಫ್, ನಾರಾಯಣ್, ರಂಗಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
——————-ಕೆ.ಬಿ ಚಂದ್ರಚೂಡ