ಕೊಟ್ಟಿಗೆಹಾರ:ಬಾಳೂರು ಹೋಬಳಿಯ ಚಂದುವಳ್ಳಿ ಗ್ರಾಮದ ಬಸ್ ತಂಗುದಾಣ ಅಕ್ರಮ ಚಟುವಟಿಕೆಗಳ ತಾಣವಾಗಿದ್ದು ಪೊಲೀಸರು ಇದಕ್ಕೆ ಕಡಿವಾಣ ಹಾಕುವಂತೆ ಕಾಮಿಡಿ ಕಿಲಾಡಿ ಖ್ಯಾತಿಯ ರಮೇಶ್ ಯಾದವ್ ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಅವರು,ಚಂದುವಳ್ಳಿ ಬಸ್ ತಂಗುದಾಣ ಸಂಜೆಯಾಯಿತೆಂದರೆ ಕುಡುಕರ, ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಾಡಾಗುತ್ತದೆ.ಕುಡಿಯುವುದು,ಸಿಗರೇಟು,ಬೀಡಿ ಸೇದುವುದು ಇತ್ಯಾದಿ ಅನಧಿಕೃತ ಚಟುವಟಿಕೆಗಳನ್ನು ಈ ಸ್ಥಳದಲ್ಲಿ ನಡೆಸಲಾಗುತ್ತಿದೆ.ಮದ್ಯದ ಬಾಟಲ್ ಗಳನ್ನೂ,ಸಿಗರೇಟು ಬೀಡಿಗಳ ತುಂಡುಗಳನ್ನು ಬಸ್ ನಿಲ್ದಾಣದ ಒಳಗಡೆಯೇ ಬಿಸಾಕಿ ಹೋಗಲಾಗುತ್ತಿದೆ.
ಇದಲ್ಲದೆ ಬಸ್ ನಿಲ್ದಾಣ ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಶಿಥಿಲಗೊಂಡಿದ್ದು ಗೋಡೆಯು ಸಹ ಬಿರುಕು ಬಿಟ್ಟು ಯಾವ ಕ್ಷಣದಲ್ಲಾದರೂ ಬಿದ್ದು ಹೋಗುವ ಭೀತಿ ಎದುರಾಗಿದೆ.ಸುತ್ತಲೂ ಕಸದ ರಾಶಿ ಇದ್ದು ಗಿಡಗಂಟೆಗಳು ಬೆಳೆದು ವಿಷಜಂತುಗಳು ಅಲ್ಲಿ ಸೇರಿಕೊಂಡಿವೆ.
ಒಂದು ವೇಳೆ ಆ ವಿಷಜಂತುಗಳು ಬಸ್ ಗೋಸ್ಕರ ಕಾಯುವ ಸಾರ್ವಜನಿಕರಿಗೆ ಕಚ್ಚಿದರೆ ಯಾರು ಜವಾಬ್ದಾರಿ ಎಂದು ರಮೇಶ್ ಯಾದವ್ ಪ್ರಶ್ನಿಸಿದರು.
ಬಹುಜನರಿಗೆ ಉಪಯೋಗವಾಗುವ ಈ ಬಸ್ ನಿಲ್ದಾಣಕ್ಕೆ ಸಂಬಂಧಪಟ್ಟವರು ಕಾಯಕಲ್ಪ ನೀಡಬೇಕು.ಪೊಲೀಸ್ ಇಲಾಖೆಯವರು ಪುಂಡರಿಗೆ ಪಾಠ ಕಲಿಸುವಂತಹ ಕೆಲಸ ಮಾಡಬೇಕು.ಇಲ್ಲದೆ ಹೋದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
———–—ಆಶ ಸಂತೋಷ್ ಅತ್ತಿಗೆರೆ