ಚಿಕ್ಕಮಗಳೂರು-ಶಾಲಾ ಮಕ್ಕಳು ಸಾಮಾಜಿಕ ಹಕ್ಕು,ಶಿಕ್ಷಣದ ಅರಿವು ಹೊಂದಬೇಕು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಜೊತೆಗೆ ಧೈರ್ಯವಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕ ಚೆಲುವರಾಜ್ ಹೇಳಿದರು.
ತಾಲ್ಲೂಕಿನ ಲಕ್ಯಾ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ಧ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಮಕ್ಕಳ ಹಕ್ಕು ಹಾಗೂ ರಕ್ಷಣೆ ಕುರಿತು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮಾರಾಟ, ಪ್ರೋಕ್ಸೋ, ಬಾಲ್ಯವಿವಾಹ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಿವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿ ಕೊಳ್ಳಲು ಸರ್ಕಾರ 1098 ಸಹಾಯವಾಣಿ ಸಂಖ್ಯೆ ಆರಂಭಿಸಿದ್ದು ಸುತ್ತಮುತ್ತಲು ಈ ರೀತಿಯ ಪ್ರಕರಣಗಳು ಸಂಭವಿಸಿದರೆ ಶೀಘ್ರವೇ ಕರೆ ಮಾಡಬಹುದು ಎಂದು ಹೇಳಿದರು.
ಸರ್ಕಾರವು ಮಕ್ಕಳಿಗೆ ಸ್ವತಂತ್ರ್ಯವಾಗಿ ಬದುಕುವ, ಅಭಿವೃದ್ದಿ ವಿಕಾಸ, ರಕ್ಷಣೆ ಹಾಗೂ ಭಾಗವಹಿಸುವ ಹಕ್ಕನ್ನು ನೀಡಿದ್ದು ನ್ಯಾಯವಾಗಿ ಎದುರಿಸುವ ಸಾಮರ್ಥ್ಯ ಹೊಂದಬೇಕು.ಅಲ್ಲದೇ ಶಾಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟಗಾ ರರಿಗೆ ಕಡಿವಾಣ ಹಾಕಲು ಶಾಲೆಯ ಶಿಕ್ಷಕರ ಗಮನಕ್ಕೆ ತಂದರೆ ಸೂಕ್ತ ಕ್ರಮವಹಿಸಲಾಗುವುದು ಎಂದರು.
ವಿದ್ಯಾರ್ಥಿನಿಯರು ಯಾವುದೇ ಕಟ್ಟುಪಾಡಿಗೆ ಜೋತುಬಿದ್ದು ಬಾಲ್ಯ ವಿವಾಹಕ್ಕೆ ಮುಂದಾಗಬಾರದು.ಹೆಚ್ಚು ಶ್ರಮದಿಂದ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ವಿವಾಹಕ್ಕೂ ಒಂದು ಸಮಯವಿದೆ. ಆ ಸಮಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಮಾತ್ರ ಪ್ರತಿಯೊಂದು ಕ್ರಮಬದ್ಧತೆಯಿಂದ ಸಾಗಲು ಸಾಧ್ಯ ಎಂದು ತಿಳಿಸಿದರು.
ಸರ್ಕಾರಗಳು ಈಗಾಗಲೇ ಮಕ್ಕಳು ದೌರ್ಜನ್ಯಕ್ಕೆ ಸಿಲುಕಬಾರದೆಂಬ ದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿ, ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಬಾಲ ನ್ಯಾಯಮಂಡಳಿ ಸ್ಥಾಪಿಸಿ ರಕ್ಷಿಸುತ್ತಿದೆ.ಆ ನಿಟ್ಟಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ಥಳೀಯವಾಗಿ ಯಾವುದೇ ವಿಚಾರ ಸಮಾಜಕ್ಕೆ ಮಾರಕವಾಗಿದ್ದರೆ ತಕ್ಷಣವೇ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ಹಲವಾರು ಪ್ರಶ್ನೆಗಳನ್ನು ವಿವಿಧ ಇಲಾಖಾ ಅಧಿಕಾರಿಗಳಿಗೆ ಪ್ರಶ್ನಿಸಿ ಉತ್ತರವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಲಕ್ಯಾ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಹನೀಫ್, ಸದಸ್ಯೆ ಗೌರಮ್ಮ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಜಗನ್ನಾಥ್, ಪೊಲೀಸ್ ಅಧಿಕಾರಿ ಅಯ್ಯಪ್ಪ, ಗ್ರಾ.ಪಂ. ಪಿಡಿಓ ಎನ್.ಎ.ಶೇಖರೇಶ್ ಹಾಗೂ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.