ಚಿಕ್ಕಮಗಳೂರು-ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೃಹಮಂತ್ರಿ ಅಮಿತ್ಶಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆಮ್ಆದ್ಮಿ ಮುಖಂಡರುಗಳು ಗುರುವಾರ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಎಎಪಿ ಜಿಲ್ಲಾ ಅಲ್ಪಸಂಖ್ಯಾತದ ಅಧ್ಯಕ್ಷ ಸೈಯದ್ ಜಮೀಲ್ ಅಹ್ಮದ್ ಇತ್ತೀಚೆಗೆ ಸಂಸತ್ ಅಧಿವೇಶನದಲ್ಲಿ ಗೃಹಮಂತ್ರಿ ಅಮಿತ್ ಶಾ ಆತುರದಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇಶದ ಜನತೆಯಲ್ಲಿ ಕೋಮು ಗಲಭೆ ಸೃಷ್ಟಿಸಿ, ಸಂವಿಧಾನ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಭಾರತ ದೇಶದಲ್ಲಿ ಸಾವಿರಾರು ಜಾತಿ,ಮತಗಳಿವೆ.ಅಂಬೇಡ್ಕರ್ ಭಾರತ ದೇಶದಲ್ಲಿ ಏಕ ಸಂವಿಧಾನ ರಚಿಸಿ ಸರ್ವರಿಗೂ ಸಮಾನ ಹಕ್ಕನ್ನು ನೀಡಿದ್ದು ಆ ಸಂವಿಧಾನವನ್ನು ಬದಲಿಸುವ ಹಕ್ಕು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಆದರೀಗ ಭಾರತದ ಗೃಹ ಮಂತ್ರಿಗಳು ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಂವಿಧಾನ ಹಾಗೂ ಅಂಬೇಡ್ಕರ್ಗೆ ಅವಮಾನಿಸಿದ್ದಾರೆ.ಕೂಡಲೇ ರಾಷ್ಟ್ರಪತಿಗಳು ಗೃಹಮಂತ್ರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಚಿವ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಎಪಿ ಮುಖಂಡರುಗಳಾದ ರಂಗನಾಥ್, ಅಂತೋಣಿ, ಜಿ.ಪ್ರಭು ಇದ್ದರು.